ಬೆಂಗಳೂರು:ಶಾಲೆಯಲ್ಲಿ ಆಟ - ಪಾಠದಲ್ಲಿ ನಿರತರಾಗಿದ್ದ ಮಕ್ಕಳು ಇದೀಗ ನಾಲ್ಕು ಗೋಡೆಗಳ ಮಧ್ಯೆ ಸಿಲುಕಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು, ಕೊರೊನಾ ವೈರಸ್ ಸೋಂಕು. ಮಾರ್ಚ್ 8ರಂದು ರಾಜ್ಯದಲ್ಲಿ ಮೊದಲ ಕೊರೊನಾ ಸೋಂಕು ಪ್ರಕರಣ ಕಾಣಿಸಿಕೊಂಡಿದ್ದು, ಈಗ ಸೋಂಕಿತರ ಸಂಖ್ಯೆ 67 ಸಾವಿರ ದಾಟಿದೆ.
ಐದು ತಿಂಗಳ ಅವಧಿ ಪೂರ್ಣಗೊಳಿಸುತ್ತಿರುವ ಕೊರೊನಾ ವೈರಸ್, ಎಲ್ಲ ಕ್ಷೇತ್ರಕ್ಕೂ ಹೊಡೆತ ಕೊಟ್ಟಿದೆ. ಅದರಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟ ಹೊಡೆತಕ್ಕೆ ಶಿಕ್ಷಣ ಸಂಸ್ಥೆಗಳು ಬಾಗಿಲು ಮುಚ್ಚಿವೆ. ಮಕ್ಕಳು ಮನೆಯಲ್ಲೇ ಲಾಕ್ ಆಗಿದ್ದು, ಅವರನ್ನು ನೋಡಿಕೊಳ್ಳುವುದೇ ದೊಡ್ಡ ಸಾಹಸ ಎಂಬುದು ಪೋಷಕರ ಅಭಿಪ್ರಾಯ. ಸದ್ಯ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಶಿಕ್ಷಣಕ್ಕೆ ಒಲವು ತೋರುತ್ತಿದ್ದು, ಸರ್ಕಾರಿ ಶಾಲೆಗಳೂ ದೂರದರ್ಶನದ ಮೂಲಕ ಸೇತುಬಂಧ ಪ್ರಯೋಗ ಮಾಡುತ್ತಿದೆ.
ನಾಲ್ಕು ಗೋಡೆಗಳ ಮಧ್ಯೆ ಟೈಂಪಾಸ್ ಮಾಡುತ್ತಿರುವ ಮಕ್ಕಳು, ಆನ್‌ಲೈನ್ ಕ್ಲಾಸ್ನಲ್ಲಿ ಮುಳುಗಿ ಹೋಗಿದ್ದಾರೆ. ಇತ್ತ ಹೊರಗಿನ ಸಂಪರ್ಕದಿಂದ ದೂರವಿರುವ ಮಕ್ಕಳನ್ನ ಸುಧಾರಿಸುವುದರ ಜೊತೆಗೆ ಇತರ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. ಈ ಬಗ್ಗೆ ಪೋಷಕರ ಅಭಿಪ್ರಾಯವೇನು ನೋಡೋಣ ಬನ್ನಿ..
''ಮಕ್ಕಳ ಸಕ್ರಿಯರಾಗಲು ಆನ್ ಲೈನ್ ಕ್ಲಾಸ್ ಸಹಾಯ''
ಕೊರೊನಾದ ಕಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವ ಸಂಬಂಧ ಪೋಷಕರಾದ ನಮಗೆ ಖಂಡಿತ ಒಪ್ಪಿಗೆ ಇಲ್ಲ. ಹಾಗಂತ ಮಕ್ಕಳ ಭವಿಷ್ಯ ಹಾಗೂ ಅವರನ್ನ ದೀರ್ಘಕಾಲದಲ್ಲಿ ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳೊದು ಬಹಳ ಮುಖ್ಯ. ಇದಕ್ಕೆ ಸಹಾಯವಾಗಿರುವುದು ಆನ್ ಲೈನ್ ಕ್ಲಾಸ್ ಗಳು ಅಂತಾರೆ ಚಿತ್ರಾ ಹರ್ಷ.
ಶಾಲೆಯ ತರಗತಿಯಷ್ಟು ಮಕ್ಕಳಿಗೆ ಖುಷಿ ನೀಡದೇ ಇದ್ದರೂ ಆನ್‌ಲೈನ್ ಕಾರಣಕ್ಕೆ ಅವರು ಚಟುವಟಿಕೆಗಳಿಂದ ಇದ್ದಾರೆ. ಲಾಕ್ಡೌನ್ನಿಂದ ಮಕ್ಕಳನ್ನ ಹೊರಗೆ ಕಳುಹಿಸುವುದು ಕಷ್ಟವಾಗುತ್ತದೆ. ಹೀಗಾಗಿ ಅವರೊಟ್ಟಿಗೆ ನಾವು ಒಂದಾಗಿ ಅವರಿಗೆ ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳುತ್ತಿದ್ದೇವೆ. ಬಿಡುವಿನ ವೇಳೆಯಲ್ಲಿ ನಮಗೆ ಗೊತ್ತಿರುವ ಸಂಗೀತ, ನೃತ್ಯ, ಸಣ್ಣ-ಪುಟ್ಟ ಅಡುಗೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಚಿತ್ರಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.
''ಕೋವಿಡ್ ಕಾಲದಲ್ಲಿ ಭವಿಷ್ಯ ರೂಪಿಸುವ ನಮ್ಮ ಭವಿಷ್ಯವೇ ಸಂಕಷ್ಟದಲ್ಲಿದೆ''
ಈಗ ಶಾಲಾ- ಕಾಲೇಜು ಆರಂಭವಾಗುವುದು ಅನುಮಾನ. ಈ ಸನ್ನಿವೇಶದಲ್ಲಿ ಅದೆಷ್ಟೋ ಬಡ ಶಿಕ್ಷಕರು ಜೀವನ ನಡೆಸುವುದು ಕಷ್ಟವಾಗಿದೆ. ಕೊರೊನಾ ಪ್ಯಾಕೇಜ್ ರೀತಿ ಶಿಕ್ಷಕರಿಗೆ ನೀಡಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಶಿಕ್ಷಕ ನಂಜುಂಡಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯ ತರಗತಿಯಲ್ಲೇ ಮಕ್ಕಳನ್ನ ಹಿಡಿದು ಇಟ್ಟುಕೊಳ್ಳುವುದು ಕಷ್ಟ. ಹೀಗಿರುವಾಗ ಆನ್‌ಲೈನ್ ಶಿಕ್ಷಣದಲ್ಲೇ ಮಕ್ಕಳ ಏಕಾಗ್ರತೆ ಅಷ್ಟಕಷ್ಟೇ. ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಅಲ್ಲೇ ಕಚ್ಚಾಟ ಶುರುವಾಗಿರುತ್ತದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಆನ್‌ಲೈನ್ ಒಂದು ಭಾಗವಾಗಬಹುದೇ ವಿನಃ ಪುರ್ಣ ಕಲಿಕೆ ಅಸಾಧ್ಯ ಎಂದು ನಂಜುಂಡಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
''ನಮ್ಮ ಮಕ್ಕಳ ಅಭಿರುಚಿ ತಿಳಿಯಲು ಸಾಧ್ಯವಾಯ್ತು''
ಕೊರೊನಾದಿಂದಾಗಿ ಹಲವು ಸಮಸ್ಯೆಗಳು ಆಗಿರುವುದು ಖಂಡಿತ. ಆದರೆ, ಇದೇ ಕೊರೊನಾದಿಂದ ನಮ್ಮ ಮಕ್ಕಳು ಮನೆಯಲ್ಲಿಯೇ ಇರುವಂತಾಗಿದೆ. ಇದರಿಂದ ನಮ್ಮ ಮಕ್ಕಳ ಎಷ್ಟೋ ವಿಚಾರ ಅವರ ಅಭಿರುಚಿ ಏನು ಅಂತ ತಿಳಿಯಲು ಸಾಧ್ಯವಾಗಿದೆ ಅಂತಾರೆ ಪೋಷಕರಾದ ಮಂಜುಳಾ.
ಆನ್‌ಲೈನ್ ಶಿಕ್ಷಣದಿಂದಾಗಿ ಮಕ್ಕಳು ಸಂಪೂರ್ಣವಾಗಿ ನಮ್ಮನ್ನ ಅವಲಂಬಿಸಿದ್ದಾರೆ. ಶಾಲೆಯಲ್ಲಿ ಇರುವಾಗ ಶಿಕ್ಷಕರ ಮೇಲೆ ಜವಾಬ್ದಾರಿ ಇರುತ್ತಿತ್ತು. ಇದೀಗ ನಾವೇ ಅವರನ್ನ ಸರಿಯಾದ ದಾರಿಯಲ್ಲಿ ಕರೆದುಕೊಂಡು ಹೋಗಬೇಕಿದೆ. ಕೊರೊನಾ ಕಾರಣಕ್ಕೆ ಹೊರಗೆ ಆಟವಾಡಲು ಕಳುಹಿಸಲು ಆಗದ ಸ್ಥಿತಿ ಇದೆ. ನಾಲ್ಕು ಗೋಡೆಗಳ ಮಧ್ಯೆ ಇದ್ದು ಮಂಕಾಗುವ ಮಕ್ಕಳಿಗೆ ನಾವೇ ಸ್ನೇಹಿತರಾಗಬೇಕಿದೆ ಅಂತ ಸಲಹೆ ನೀಡಿದರು.