ಬೆಂಗಳೂರು: ಲಾಕ್ಡೌನ್ನ ಮೂರನೇ ಬಾರಿಗೆ ವಿಸ್ತರಣೆಗೊಂಡಿದೆ. ಈ ಲಾಕ್ಡೌನ್ ಘೋಷಣೆಯಾದ ದಿನದಿಂದ ತಟಸ್ಥವಾಗಿದ್ದ ಕಾರುಗಳು ಬಳಕೆಯಾಗದೇ ದುಸ್ಥಿತಿ ತಲುಪಿವೆ. ಕೆಲವು ಸಡಿಲಿಕೆಗಳನ್ನು ಸರ್ಕಾರ ನೀಡಿದೆಯಾದರೂ ಕೂಡಾ ವಾಹನ ಸಂಚಾರ ಸಂಪೂರ್ಣವಾಗಿ ಆರಂಭವಾಗಿಲ್ಲ. ಅದರಲ್ಲೂ ಬಾಡಿಗೆ ಕಾರುಗಳ ಓಡಾಡಕ್ಕೆ ಸಮಯ ನಿಗದಿಪಡಿಸಲಾಗಿದೆ. ಸಾಫ್ಟ್ವೇರ್ ಸೇರಿದಂತೆ ವಿವಿಧ ಕ್ಷೇತ್ರ ಹಾಗೂ ಉದ್ಯಮಗಳಲ್ಲಿ ಕೆಲಸ ಮಾಡುವವರಿಗೆ ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ತೆರಳಲು ಅನುಮತಿ ಸಿಕ್ಕಿಲ್ಲ. ಈ ಹಿನ್ನೆಲೆ ಲಾಕ್ಡೌನ್ ಸಡಿಲಿಕೆಗೊಂಡಿದ್ದರೂ ಇನ್ನೂ ಶೇಕಡಾ 70ರಷ್ಟು ವಾಹನಗಳು ಈಗಲೂ ಮನೆಗಳ ಮುಂದೆ ನಿಂತಿವೆ.
ರಾಜ್ಯ ಸರ್ಕಾರ ಸಮಯ ಮಿತಿ ಹೇರಿದ್ದು ಇದರ ಉಲ್ಲಂಘನೆ ಆದರೆ ಪೊಲೀಸ್ ಇಲಾಖೆ ದಂಡ ವಿಧಿಸುತ್ತದೆ. ಕಂಪನಿಗಳು 24 ಗಂಟೆ ಕಾರ್ಯನಿರ್ವಹಿಸುವುದಾದರೆ ಮಾತ್ರ ಕೆಲಸಕ್ಕೆ ಅವಕಾಶ ನೀಡುತ್ತವೆ. ಆದರೆ ಸರ್ಕಾರದ ಸಮಯ ಮೀರಿ ಸಂಚರಿಸಿದರೆ ಬೀಳುವ ದಂಡವನ್ನು ಕಟ್ಟಿಕೊಡಲು ಸಿದ್ಧವಿಲ್ಲ. ಈ ಕಂಪನಿಗಳನ್ನು ನಂಬಿಕೊಂಡು ತಿಂಗಳ ಪ್ರೀಮಿಯಂ ಕಟ್ಟುವವರ ಸ್ಥಿತಿಯಂತೂ ಶೋಚನೀಯವಾಗಿದೆ.