ಬೆಂಗಳೂರು:ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಫಲಿತಾಂಶವನ್ನು ನೀಡುವ ಸಂಬಂಧ ಪರಿಗಣಿಸಬಹುದಾದ ಮಾನದಂಡಗಳು ಹಾಗೂ ಅನುಸರಿಸಬಹುದಾದ ವಿಧಾನಗಳ ಬಗ್ಗೆ ವರದಿ ನೀಡಲು ಇಲಾಖೆಯ 12 ತಜ್ಞರ ಸಮಿತಿಯನ್ನು ರಚಿಸಿ, ನಂತರ ಸಮಿತಿ ಶಿಫಾರಸಿನ ಮೇರೆಗೆ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಇಂದು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಸುರೇಶ್ಕುಮಾರ್, ಪರೀಕ್ಷೆಗಾಗಿ ರಾಜ್ಯಾದ್ಯಂತ 6,66,497 ವಿದ್ಯಾರ್ಥಿಗಳು ನೋಂದಣಿಯಾಗಿದ್ದು ಇದರಲ್ಲಿ 5,90,153 ಹೊಸ ವಿದ್ಯಾರ್ಥಿಗಳು ಹಾಗೂ 76,344 ಪುನರಾವರ್ತಿತ ವಿದ್ಯಾರ್ಥಿಗಳಿದ್ದರು ಎಂದು ಸಚಿವರು ಮಾಹಿತಿ ನೀಡಿದರು.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು, ಪ್ರಥಮ ಪಿಯುಸಿಯಲ್ಲಿ ಮತ್ತು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕಗಳು ಸೇರಿಸಿದಂತೆ ದ್ವಿತೀಯ ಪಿಯುಸಿಯ ಶೈಕ್ಷಣಿಕ ಚಟುವಟಿಕೆಗಳಿಗೆ ನಿಗದಿಪಡಿಸಿದ ಅಂಕಗಳು ಮತ್ತು ಕೃಪಾಂಕಗಳ ಆಧಾರದ ಮೇಲೆ ಅಂಕಗಳನ್ನು ನಿಗದಿಪಡಿಸಿ ಫಲಿತಾಂಶವನ್ನು ಸಿದ್ಧಪಡಿಸಲಾಗಿದೆ. ಯಾವುದೇ ಮಗುವಿಗೆ ಅನ್ಯಾಯವಾಗದ ರೀತಿಯಲ್ಲಿ, ಪ್ರತಿಭೆಗೆ ಅನುಗುಣವಾಗಿ ಪ್ರಾಮಾಣಿಕ ಫಲಿತಾಂಶ ನೀಡಲು ಮುಂದಾಗಿದ್ದೇವೆ ಅಂತ ಸಚಿವರು ತಿಳಿಸಿದರು.
ಮೊಬೈಲ್ಗೆ ಬರಲಿದೆ ದ್ವಿತೀಯ ಪಿಯುಸಿ ಫಲಿತಾಂಶ
STA (Student Tracking System)ನಲ್ಲಿ ನೋಂದಾಯಿಸಿಕೊಂಡಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅವರ ಮೊಬೈಲ್ಗೆ ಎಸ್ಎಂಎಸ್ ಮೂಲಕ ಫಲಿತಾಂಶ ಬಂದು ತಲುಪುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಲೇಜಿಗೆ ಬರುವ ಅಗತ್ಯವಿಲ್ಲ. ಹಾಗೇ karresults.nic.in ವೆಬ್ಸೈಟ್ ಮೂಲಕವೂ ಫಲಿತಾಂಶ ನೋಡಬಹುದು ಎಂದು ಸಚಿವರು ಮಾಹಿತಿ ನೀಡಿದರು.
ಫಲಿತಾಂಶ ತಿರಸ್ಕರಿಸಿದರೆ ಆಗಸ್ಟ್ 19ರಲ್ಲಿ ಪರೀಕ್ಷೆ
ಈಗ ಹೊರಡಿಸಿರುವ ಫಲಿತಾಂಶದ ಬಗ್ಗೆ ಅಸಮಾಧಾನ ಇದ್ದರೆ, ವಿದ್ಯಾರ್ಥಿಗಳು ಆಗಸ್ಟ್ನಲ್ಲಿ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶವಿದೆ. ಖಾಸಗಿ ವಿದ್ಯಾರ್ಥಿಗಳಿಗೂ ಕೂಡಾ ಪರೀಕ್ಷೆ ನಡೆಸಿ ಫಲಿತಾಂಶ ಒದಗಿಸಲಾಗುತ್ತದೆ. ಫಲಿತಾಂಶ ತಿರಸ್ಕರಿಸಿದ ವಿದ್ಯಾರ್ಥಿಗಳು ಮಾಹಿತಿಯನ್ನು ಪ್ರಾಂಶುಪಾಲರು SATsನಲ್ಲಿ ಅಪಡೇಟ್ ಮಾಡಲು ಜುಲೈ 30 ಕಡೆಯ ದಿನವಾಗಿದೆ.