ಬೆಂಗಳೂರು :ಆಗಸ್ಟ್ 23ರಿಂದ ಪ್ರೌಢಶಾಲೆಯ 9 ಮತ್ತು 10ನೇ ತರಗತಿಗಳನ್ನು ಪುನಾರಂಭ ಮಾಡಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.
ಶಾಲೆ ಪುನಾರಂಭದ ಪೂರ್ವ ಸಿದ್ಧತೆ ಪರಿಶೀಲನೆ ಸಂಬಂಧ ಬೆಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ವಿಡಿಯೊ ಕಾನ್ಫರೆನ್ಸ್ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು ಶಾಲೆ ಆವರಣದಲ್ಲಿ ಶುಚಿತ್ವ ಅತಿ ಮುಖ್ಯ. ಶೌಚಗೃಹ, ಶಾಲಾ ಆವರಣ, ಕೊಠಡಿಗಳು ಸೇರಿದಂತೆ ಎಲ್ಲಾ ಕಡೆ ಶುಚಿತ್ವ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಶಾಲೆಗಳ ಮುಖ್ಯ ಗುರುಗಳು ಮತ್ತು ಶಿಕ್ಷಕರ ಜವಾಬ್ದಾರಿಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಶುಚಿತ್ವ ಮತ್ತು ಸುರಕ್ಷತೆ ನಿರಂತರವಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲೆ ಕೊಠಡಿಗಳು, ಆವರಣ, ಶೌಚಗೃಹ ಸೇರಿದಂತೆ ಕೊಠಡಿಗಳು, ಬೆಂಚುಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಜ್ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡುವ ಕುರಿತು ಶಿಕ್ಷಕರಿಗೆ ಮಾಹಿತಿಯನ್ನು ನೀಡಿ, ತಿಳಿ ಹೇಳಲಾಗಿದೆ. ಮಕ್ಕಳು ಸಹಿತ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಸಚಿವರು ಹೇಳಿದ್ದಾರೆ.
ಮಕ್ಕಳಿಗೆ ಕುಡಿಯಲು ಬಿಸಿ ನೀರು ಒದಗಿಸಬೇಕು. ಸಾಧ್ಯವಾದರೆ ಮಕ್ಕಳೇ ಮನೆಯಿಂದ ಬಿಸಿ ನೀರು ತಂದುಕೊಂಡರೆ ಉತ್ತಮ. ಕೆಲವು ದಿನಗಳಲ್ಲಿ ಈ ಎಲ್ಲಾ ವಿಚಾರಗಳು ಸರಿ ಹೋಗುತ್ತವೆ. ಶಾಲೆಗಳಲ್ಲಿ ಸುರಕ್ಷತಾ ಕ್ರಮಗಳು ಪರಿಪಾಲನೆಯಾಗುತ್ತಿರುವ ಕುರಿತು ಬಿಇಒಗಳು ತಮ್ಮ ವ್ಯಾಪ್ತಿಯ ಕನಿಷ್ಠ ಶೇ.50ರಷ್ಟು ಶಾಲೆಗಳಿಗಾದರೂ ಭೇಟಿ ನೀಡಿ ಪರಿಶೀಲಿಸಬೇಕು. ಒಂದು ವೇಳೆ ಕೊಠಡಿ ಕೊರತೆಯಾದರೆ ಸಿಬ್ಬಂದಿ ಕೊಠಡಿ ಬಳಸಿಕೊಳ್ಳಬೇಕು. ಈ ಮೂಲಕ ಶಾಲೆಗಳು ಪುನಾರಂಭ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಕೋವಿಡ್ ಲಸಿಕೆ ಕಡ್ಡಾಯ..
ಶಾಲೆ ಆರಂಭಿಸಲು ಮಕ್ಕಳು ಮತ್ತು ಪಾಲಕರ ಅಭಿಪ್ರಾಯವನ್ನು ಬಿಇಒಗಳು ಸಂಗ್ರಹಿಸಿದ್ದು, ಪಾಲಕರು ಶಾಲೆ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ. ಮಕ್ಕಳು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. ಒಂದೂವರೆ ವರ್ಷದಿಂದ ಭೌತಿಕ ಶಿಕ್ಷಣ ಸಿಗದೆ ಮಕ್ಕಳು ಬೇಸರಗೊಂಡಿದ್ದಾರೆ. ಮಕ್ಕಳನ್ನು ಕಳುಹಿಸುತ್ತೇವೆ. ಬೇಗ ಆರಂಭಿಸಿ ಎಂದು ಕೇಳುತ್ತಿದ್ದಾರೆ. ಮಕ್ಕಳ ಪಾಲಕರು ಮತ್ತು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕಡ್ಡಾಯಗೊಳಿಸಲಾಗಿದೆ.