ಬೆಂಗಳೂರು:1.20 ಕೋಟಿ ಮಕ್ಕಳಿರುವ ಶಿಕ್ಷಣ ಇಲಾಖೆಯಲ್ಲಿ ಸುಮಾರು 500-600 ಮಕ್ಕಳು ಮಾತ್ರ ಹಿಜಾಬ್ ಹಾಕಿಕೊಂಡೆ ಬರುತ್ತೇವೆ ಎಂದು ಹಠ ಹಿಡಿದಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಹುತೇಕ ನಾಳೆಗೆ ಎಲ್ಲರೂ ಸಮವಸ್ತ್ರ ಧರಿಸಿ ಶಾಲೆಗೆ ಬರುವ ವಿಶ್ವಾಸ ಇದೆ. ರಾಜ್ಯದ 5,300 ಪಿಯುಸಿ ಕಾಲೇಜಿನಲ್ಲಿ ನಾಲ್ಕು ಕಾಲೇಜುಗಳಲ್ಲಿ ಮಾತ್ರ ಹಿಜಾಬ್ ಹಾಕಿಕೊಂಡು ಬರಲು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ ಎಂದರು.
ಮಾಧ್ಯಮಗಳೊಂದಿಗೆ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ಇದನ್ನೂ ಓದಿ:'ನಮಗೆ ಹಿಜಾಬ್ ಮುಖ್ಯ': ವಿಜಯಪುರದಲ್ಲಿ ತರಗತಿ ಬಹಿಷ್ಕರಿಸಿದ ವಿದ್ಯಾರ್ಥಿನಿಯರು
ಅವರನ್ನು ಮನವೊಲಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಕ್ಕಳು ಹೈಕೋರ್ಟ್ ಆದೇಶ ಪಾಲನೆ ಮಾಡುತ್ತಿರುವುದು ಸಂತಸದ ವಿಷಯ ಎಂದು ಸಚಿವರು ಹೇಳಿದರು.
ಇಂದು ತರಗತಿಯಲ್ಲಿ ಹಿಜಾಬ್ಗೆ ಅವಕಾಶ ನೀಡಬೇಕೆಂದು ಆಗ್ರಹಿಸಿ ಕೆಲ ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಮನೆಗೆ ವಾಪಸ್ ತೆರಳಿದ ಘಟನೆ ವಿಜಯಪುರದ ಸರ್ಕಾರಿ ಮಹಿಳಾ ಪಿಯು ಹಾಗೂ ಡಿಗ್ರಿ ಕಾಲೇಜಿನಲ್ಲಿ ನಡೆಯಿತು.