ಬೆಂಗಳೂರು: ಸಾಂಕ್ರಾಮಿಕ ಕೋವಿಡ್ ಸೋಂಕಿನಿಂದಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಬ್ರೇಕ್ ಹಾಕಿ, ದವಸ ಧಾನ್ಯಗಳನ್ನ ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿತ್ತು.
2020-21ನೇ ಸಾಲಿನಲ್ಲಿ ಶಾಲೆಗಳನ್ನು ತೆರೆಯದೆ 2020ರ ಮಾರ್ಚ್ 14 ರಿಂದ ಈವರೆಗೆ ಆಹಾರ ಭದ್ರತಾ ಕಾಯ್ದೆ 2013ರ ಅಡಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿಯ ಅರ್ಹ ವಿದ್ಯಾರ್ಥಿ ಫಲಾನುಭವಿಗಳಿಗೆ ಬಿಸಿಯೂಟದ ಬದಲಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ.
ಇದೀಗ, ಕೋವಿಡ್ ಪ್ರಕರಣಗಳ ಸಂಖ್ಯೆ ನಿಧಾನವಾಗಿ ಇಳಿಕೆಯಾಗುತ್ತಿದ್ದು, ಜತೆಗೆ ಪೂರ್ಣ ಪ್ರಮಾಣದಲ್ಲಿ 6-10ನೇ ತರಗತಿಗಳು ಆರಂಭವಾಗಿವೆ. ಇತ್ತ ನವೆಂಬರ್ 1 ರಿಂದ 1ರಿಂದ 5ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಕೋರಿ ಸರ್ಕಾರಕ್ಕೆ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ.
ಹೀಗಾಗಿ, 2021-22ನೇ ಸಾಲಿನಲ್ಲಿ PM-POSHAN Shakthi Nirman ಮಧ್ಯಾಹ್ನ ಉಪಹಾರ ಯೋಜನೆಯಡಿ ಶಾಲೆಗಳಲ್ಲಿರುವ ಅಡುಗೆ ಕೇಂದ್ರಗಳಲ್ಲಿ ಬಿಸಿಯೂಟ ಸಿದ್ಧಪಡಿಸುವ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಬಿಸಿಯೂಟ ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ವಿತರಿಸಲು ಅಗತ್ಯ ಪೂರ್ವ ತಯಾರಿಗಾಗಿ ಕೋವಿಡ್ ಮಾರ್ಗಸೂಚಿಯನ್ನ ಬಿಡುಗಡೆ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಬಿಸಿಯೂಟ ಸಿದ್ಧಪಡಿಸುವ ಕೆಲಸ ಪುನಾರಂಭಿಸುವ ಪೂರ್ವದಲ್ಲಿಯೇ ಶಾಲೆಗಳಲ್ಲಿ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಅಡುಗೆ ಕೇಂದ್ರಗಳಲ್ಲಿ ಸೂಕ್ತ ರೀತಿಯಲ್ಲಿ ಸಮರ್ಪಕವಾಗಿ ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳುವುದು. ಶಾಲಾ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಅಗತ್ಯವಿದೆ.
ಈ ಸಂಬಂಧ ಶಾಲಾ ಮುಖ್ಯಸ್ಥರು, ಅಡುಗೆ ಸಿಬ್ಬಂದಿ, ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ತಾಯಂದಿರ ಸಮಿತಿಯ ಸದಸ್ಯರು, ಅಕ್ಷರ ದಾಸೋಹ ಮೇಲ್ವಿಚಾರಣಾ ಅಧಿಕಾರಿಗಳು ಹಾಗೂ ಸಿದ್ಧಪಡಿಸಿದ ಬಿಸಿಯೂಟ ವಿತರಿಸುವ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರಿಗೆ ಪೂರ್ವ ತಯಾರಿ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ನೀಡಿ ಆದೇಶ ಹೊರಡಿಸಲಾಗಿದೆ.
ಎಸ್ಒಪಿ ಯ ಪ್ರಮುಖ ಅಂಶಗಳು ಹೀಗಿವೆ..
- ಶಾಲೆಯ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸುವುದು. ಆಹಾರ ದಾಸ್ತಾನು ಕೊಠಡಿಯನ್ನ ಡೀಪ್ ಕ್ಲಿನಿಂಗ್ ಮಾಡುವುದು.
- ಅಡುಗೆ ಕೋಣೆಯ ಅಡುಗೆ ಪಾತ್ರೆ ಪರಿಕರಗಳ ಸ್ವಚ್ಛತೆಗಾಗಿ ಸೋಪ್ ಆಯಿಲ್, ಫ್ಲೋರಿಂಗ್ ಸ್ಯಾನಿಟೈಸರ್, ಬ್ಲೀಚಿಂಗ್ ಪೌಡರ್ ಇತ್ಯಾದಿ ಸಾಮಗ್ರಿಗಳನ್ನು ಅಗತ್ಯ ಪ್ರಮಾಣದಲ್ಲಿ ಖರೀದಿಸುವುದು.
- ಶಾಲಾ ವಿದ್ಯಾರ್ಥಿಗಳು ಕೈತೊಳೆಯಲು ನೀರಿನ ವ್ಯವಸ್ಥೆಯೊಂದಿಗೆ ಹ್ಯಾಂಡ್ ವಾಷಿಂಗ್ ಯುನಿಟ್‌ಗಳನ್ನು ರಿಪೇರಿ ಮಾಡಿಸಿ ಸ್ವಚ್ಛವಾಗಿಟ್ಟು ಪ್ರತಿನಿತ್ಯ ಕೈತೊಳೆಯಲು ಉಪಯೋಗಿಸುವುದು.
- ಶಾಲೆಯಲ್ಲಿರುವ ಶೌಚಾಲಯಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಅಗತ್ಯ ಕ್ರಮ ವಹಿಸುವುದು.
- ಅಡುಗೆ ಸಿಬ್ಬಂದಿ ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
- ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ಸಾಂಕ್ರಾಮಿಕ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮವಾಗಿ 'ಎರಡು ಡೋಸ್' ಲಸಿಕೆಯನ್ನು ತಪ್ಪದೇ ಹಾಕಿಸಿಕೊಂಡಿರಬೇಕು.
- ಕಾಲಕಾಲಕ್ಕೆ ಕೋವಿಡ್-19ರ ಪರೀಕ್ಷೆಯನ್ನು ಮಾಡಿಸಿಕೊಂಡಿರುವುದನ್ನು ಮುಖ್ಯ ಶಿಕ್ಷಕರು ಖಾತ್ರಿಪಡಿಸಿಕೊಳ್ಳಬೇಕು.
ಇದನ್ನೂ ಓದಿ:ರಾಜ್ಯಾದ್ಯಂತ ಅಕ್ಟೋಬರ್ 21ರಿಂದ ಮಧ್ಯಾಹ್ನ ಬಿಸಿಯೂಟ ಆರಂಭ: ಸಚಿವ ಬಿ.ಸಿ.ನಾಗೇಶ್