ಬೆಂಗಳೂರು:2021-22ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ನೇಮಕಾತಿಯಿಂದ 9,800ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ವರದಿ ವಸ್ತುಸ್ಥಿತಿಗೆ ದೂರವಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಹೇಳಿದ್ದಾರೆ.
ಈ ಬಗ್ಗೆ ಆಯುಕ್ತರು ಮಾಧ್ಯಮಗಳಿಗೆ ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಈವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂದಾಜು 14 ಸಾವಿರ ಮಂದಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಕಾರ್ಯಭಾರ ಮತ್ತು ವೇತನ ಎರಡನ್ನೂ ಸೂಕ್ತವಾಗಿ ನಿಗದಿಪಡಿಸಿ 10,600 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ವಾಸ್ತವ ಹೀಗಿರುವಾಗ, 9,881 ಮಂದಿ ಕೆಲಸ ಕಳೆದುಕೊಳ್ಳುವ ಪ್ರಶ್ನೆ ಎಲ್ಲಿ ಉದ್ಭವವಾಗುತ್ತದೆ? ಎಂದರು.
ನೇಮಕ ಪ್ರಕ್ರಿಯೆಯಲ್ಲಿ ಸೇವಾಹಿರಿತನ, ವಯಸ್ಸು ಮತ್ತು ಯುಜಿಸಿ ನಿಗದಿತ ಅರ್ಹತೆ ಪರಿಗಣಿಸಲಾಗಿದೆ. ಜೊತೆಗೆ ನಿಯಮಾನುಸಾರ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಹೀಗಾಗಿ 14 ಸಾವಿರ ಮಂದಿಯ ಪೈಕಿ ಕೇವಲ 3,400 ಮಂದಿ ಮಾತ್ರ ಆಯ್ಕೆ ಆಗುತ್ತಿಲ್ಲ. ಆದರೆ, ಇವರಲ್ಲಿ ಕೂಡ ಹೆಚ್ಚಿನವರು ಅತ್ಯಂತ ಕಡಿಮೆ ಅನುಭವ ಹೊಂದಿದವರಾಗಿದ್ದಾರೆ ಎಂದು ವಿವರಿಸಿದರು.
ಇದುವರೆಗೂ ಅತಿಥಿ ಉಪನ್ಯಾಸಕರು ಗರಿಷ್ಠ ಅವಧಿ ಬೋಧನೆ ಮಾಡಿದರೂ ಅವರ ಮಾಸಿಕ ವೇತನ 13 ಸಾವಿರ ರೂ ದಾಟುತ್ತಿರಲಿಲ್ಲ. ಆದರೆ, ಈಗ ನೇಮಕ ಆಗುತ್ತಿರುವವರಿಗೆ ಗರಿಷ್ಠ 32 ಸಾವಿರ ರೂ. ವರೆಗೆ ಸಿಗುವ ಹಾಗೆ ಮಾಡಲಾಗಿದೆ. ಅತಿಥಿ ಉಪನ್ಯಾಸಕರ ಹುದ್ದೆಗೆ 60 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ ಈವರೆಗೆ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದರವರನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಇದನ್ನೂ ಓದಿ: ನೌಕರಿ ಆಮಿಷವೊಡ್ಡಿ ನಗ್ನ ಫೋಟೋ, ವಿಡಿಯೋ ಮೂಲಕ ಬ್ಲಾಕ್ಮೇಲ್: ಶಿರಸಿಯಲ್ಲಿ ಮೂವರು ಅಂದರ್