ಬೆಂಗಳೂರು :ಕಾಸರಗೋಡು ಜಿಲ್ಲೆ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠಾಧೀಶರಾದ ಕೇಶವಾನಂದ ಭಾರತೀ ಸ್ವಾಮೀಜಿಗಳ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ ಸೂಚಿಸಿದ್ದಾರೆ.
ಶ್ರೀಗಳು ದೈವಾಧೀನರಾದ ಸುದ್ದಿ ಕೇಳಿ ತೀವ್ರ ನೋವುಂಟಾಯಿತು. ಶ್ರೀಗಳ ನಿಧನವು ಸಮಸ್ತ ನಾಡಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸಂದೇಶದ ಮೂಲಕ ತಿಳಿಸಿದ್ದಾರೆ. ಶ್ರೀಗಳು ಕೇರಳ ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ನೆಪದಲ್ಲಿ ಮಠಗಳ ಸಂಪತ್ತಿನ ಮೇಲೆ ವಿಶೇಷ ಕಟ್ಟುಪಾಡುಗಳನ್ನು ವಿಧಿಸುವಂತಹ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ಉಂಟು ಮಾಡುವ ಪ್ರಯತ್ನದ ವಿರುದ್ಧ ಕಾನೂನು ಹೋರಾಟ ನಡೆಸಿ ಜಯಗಳಿಸಿದ್ದಾರೆ.
13 ನ್ಯಾಯಾಧೀಶರ ವಿಶೇಷ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ತನ್ನ ಐತಿಹಾಸಿಕ ತೀರ್ಪಿನಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಗಳ ವಾದ ಎತ್ತಿ ಹಿಡಿದು ಸಂವಿಧಾನದ ಮೂಲ ಆಶಯಗಳನ್ನು ಬದಲಿಸುವ ಹಕ್ಕು ಯಾರಿಗೂ ಇಲ್ಲ ಎಂದು ಸಾರಿತು. ಈ ಮೂಲಕ ಕೇಶವಾನಂದ ಭಾರತೀ ಸ್ವಾಮಿಗಳು ಯಾವುದೇ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರದ ರೀತಿ ಈ ನೆಲದ ಘನತೆ, ಪರಂಪರೆ ಮತ್ತು ರಾಷ್ಟ್ರ ಸಾಂವಿಧಾನಿಕ ಗೌರವವನ್ನು ಕಾಪಾಡಿದ್ದರು ಎಂದು ಕಟೀಲ್ ಶ್ರೀಗಳ ಕೊಡುಗೆ ಸ್ಮರಿಸಿದ್ದಾರೆ.