ಬೆಂಗಳೂರು: ಇತ್ತೀಚೆಗೆ ರಾಜ್ಯದಲ್ಲಿ ನಡೆದ ಎಸಿಬಿ ಅಧಿಕಾರಿಗಳ ದಾಳಿ ಮತ್ತಷ್ಟು ತಿರುವು ಪಡೆಯುತ್ತಿದೆ. ಬಿಡಿಎ ಕಚೇರಿ ಮೇಲೆ ನಡೆದ ದಾಳಿ ಹಾಗೂ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ನಡೆಸಿದ ದಾಳಿ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ (ಇಡಿ) ಎಂಟ್ರಿ ಕೊಡುವ ಸಾಧ್ಯತೆಯಿದೆ. ಹಾಗೇನಾದರೂ ಇಡಿ ದಾಳಿ ಶುರುವಾದರೆ ಈಗ ಸಿಕ್ಕಿಬಿದ್ದಿರುವ ಭ್ರಷ್ಟರಿಗೆ ಮತ್ತೆ ಸಂಕಷ್ಟ ಎದುರಾಗುವುದು ಗ್ಯಾರಂಟಿ.
ರಾಜ್ಯದಲ್ಲಿ ಎರಡು ದಿನಗಳ ಹಿಂದೆ ನಡೆದ ಎಸಿಬಿ ಮೆಗಾ ರೇಡ್ ವೇಳೆ 15 ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಲಕ್ಷ ಲಕ್ಷ ಹಣ, ಕೆಜಿ ಚಿನ್ನ ಪತ್ತೆಯಾಗಿತ್ತು. ಹೀಗಾಗಿ ಇಡಿ ಅಧಿಕಾರಿಗಳು ಭ್ರಷ್ಟ ಕುಳಗಳ ಬಗ್ಗೆ ಪತ್ರದ ಮೂಲಕ ಎಸಿಬಿ ಬಳಿ ಮಾಹಿತಿ ಪಡೆಯುವ ಸಾಧ್ಯತೆ ಇದೆ.
ಯಾವ ಅಧಿಕಾರಿ ಮನೆಯಲ್ಲಿ ಏನೇನು ಪತ್ತೆಯಾಗಿದೆ. ಪತ್ತೆಯಾದ ಚಿನ್ನ ಎಷ್ಟು, ನಗದು ಎಷ್ಟು, ಆಸ್ತಿ ಎಷ್ಟು ಎಂದು ಮಾಹಿತಿ ಕೇಳುವ ಸಾಧ್ಯತೆ ಇದೆ. ಈ ಹಿಂದೆಯೂ ಸಹ ಇಡಿ, ಎಸಿಬಿಗೆ ಪತ್ರ ಬರೆದು ಹಲವು ಪ್ರಕರಣಗಳ ಮಾಹಿತಿ ಪಡೆದುಕೊಂಡಿತ್ತು.
ಇದನ್ನೂ ಓದಿ:ಅಕ್ರಮ ಆಸ್ತಿ ಗಳಿಕೆ: ರುದ್ರೇಶಪ್ಪಗೆ ಡಿಸೆಂಬರ್ 7ರ ತನಕ ನ್ಯಾಯಾಂಗ ಬಂಧನ
ಎಸಿಬಿ ಅಧಿಕಾರಿಗಳ ಕೈಯಲ್ಲಿ 112 ಬಿಡಿಎ ಫೈಲ್ಗಳು
ಎಸಿಬಿ ಅಧಿಕಾರಿಗಳು ಬಿಡಿಎ ಕೇಂದ್ರ ಕಚೇರಿ ಸೇರಿದಂತೆ ನಾಲ್ಕು ಸಬ್ ಕಚೇರಿಗಳ ಮೇಲೆ ದಾಳಿ ಮಾಡಿ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ, ಬರೋಬ್ಬರಿ 112 ಕಡತಗಳು ಸಿಕ್ಕಿದ್ದು, ಇಂದು ಸ್ಪೆಷಲ್ ಎಕ್ಸ್ ಫರ್ಟ್ ಟೀಂ ಪರಿಶೀಲನೆ ನಡಸಲಿದೆ. ಆದರೆ, ಇವು ಸೈಟ್ ಮತ್ತು ಲೇಔಟ್ಗಳಿಗೆ ಸಂಬಂಧಿಸಿದ ಫೈಲ್ಗಳಾಗಿದ್ದು, ಪರಿಶೀಲನೆಗೆ ಒಂದು ವಾರ ಬೇಕಿದೆ.
ಇದಕ್ಕಾಗಿಯೇ ಹತ್ತು ಮಂದಿ ಎಕ್ಸ್ಫರ್ಟ್ ಟೀಂ ಅನ್ನ ಸಿದ್ಧ ಮಾಡಿದ್ದು, ಪ್ರತಿಯೊಂದು ಮಾಹಿತಿಯನ್ನು ಜಾಲಾಡುತ್ತಿದ್ದಾರೆ. ಇದಲ್ಲದೇ, ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆಯಲು ಸಹ ಎಸಿಬಿ ಟೀಂ ಮುಂದಾಗಿದೆ.
ಇದನ್ನೂ ಓದಿ:ACB raids on BDA.. ಬಿಡಿಎ ಕಚೇರಿಗಳ ಮೇಲೆ ಮುಂದುವರೆದ ಎಸಿಬಿ ದಾಳಿ
ಕಳೆದ ಒಂದು ತಿಂಗಳಲ್ಲಿ ಬಿಡಿಎ ವಿರುದ್ಧ 156 ದೂರುಗಳು ಎಸಿಬಿಯಲ್ಲಿ ದಾಖಲಾಗಿದೆ. ಕೇವಲ ಐದೇ ದಿನದಲ್ಲಿ ಎಸಿಬಿಯಲ್ಲಿ ಐವತ್ತಕ್ಕೂ ಹೆಚ್ಚು ದೂರುಗಳು ಬಂದಿದ್ದು, ದೂರಿನ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಈ ದಾಳಿಯ ಮೇಲೂ ಇಡಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.