ಬೆಂಗಳೂರು:ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸಹಕಾರ ಬ್ಯಾಂಕ್ ಅಧ್ಯಕ್ಷ ಹಾಗೂ ನಿರ್ಮಾಪಕ ಆನಂದ್ ಬಾಲಕೃಷ್ಣ ಅಪ್ಪುಗೋಳ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.
ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಠೇವಣಿದಾರರಿಂದ ಸುಮಾರು 250 ಕೋಟಿ ರೂಪಾಯಿ ವಂಚನೆ ಆರೋಪ ಸಂಬಂಧ ಆನಂದ್ ಅಪ್ಪುಗೋಳ್ ಅವರನ್ನು ಬಂಧಿಸಿರುವುದಾಗಿ ಇಡಿ ಟ್ವೀಟ್ ಮಾಡಿದೆ.
ಈ ಸಂಬಂಧ ಇ.ಡಿ.ಅಧಿಕಾರಿಗಳು ಅಪ್ಪುಗೋಳ್ಗೆ ಸೇರಿದ 31.35 ಕೋಟಿ ಮೌಲ್ಯದ ಆಸ್ತಿ ಹಾಗೂ ಹಣವನ್ನು ಈಗಾಗಲೇ ಜಪ್ತಿ ಮಾಡಿದ್ದಾರೆ. ಅಪ್ಪುಗೋಳ್ ಅವರು ನಟ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರ ನಿರ್ಮಿಸಿದ್ದರು. ಆನಂದ್ ಅವರು ಕೆಲ ವರ್ಷಗಳ ಹಿಂದೆ ಠೇವಣಿದಾರರಿಂದ ಕಟ್ಟಿಸಿಕೊಂಡಿದ್ದ ಹಣ ಹಿಂತಿರುಗಿಸದೆ ಏಕಾಏಕಿ ಬ್ಯಾಂಕ್ನ ಎಲ್ಲಾ ಶಾಖೆಗಳನ್ನು ಮುಚ್ಚುವ ಮೂಲಕ ಹಣ ವಂಚನೆ ಮಾಡಿದ್ದರು ಎಂಬ ಆರೋಪ ಇದೆ.
ಅಪ್ಪುಗೋಳ್ ಆಸ್ತಿಯನ್ನು ಹರಾಜು ಮಾಡಬೇಕೆಂದು ಕೋರಿ ಬೆಳಗಾವಿ ಸಹಾಯಕ ಜಿಲ್ಲಾಧಿಕಾರಿ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನೂರಾರು ಕೋಟಿ ವಂಚನೆ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸ್ವಯಂಪ್ರೇರಿತವಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ದಾಖಲಿಸಿಕೊಂಡು 31.35 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ್ದಾರೆ.