ಶ್ರಮಿಕ ವರ್ಗಕ್ಕೆ ಆರ್ಥಿಕ ಪ್ಯಾಕೇಜ್; ಸಂಜೆ ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ? - ಸಿಎಂ ಸಭೆ
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಜೆ 6 ಗಂಟೆಗೆ ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಕೋವಿಡ್ ಸ್ಥಿತಿಗತಿ ಅವಲೋಕನ ಮಾಡಲಿರುವ ಸಿಎಂ, ಶ್ರಮಿಕ ವರ್ಗಕ್ಕೆ ನೆರವು ಅಥವಾ ಪ್ಯಾಕೇಜ್ ನೀಡುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ.
ಬೆಂಗಳೂರು: ಲಾಕ್ಡೌನ್ ಮಾದರಿಯಲ್ಲಿ 14 ದಿನಗಳ ಕಠಿಣ ನಿಯಮಾವಳಿ ಜಾರಿಗೆ ತಂದಿರುವ ರಾಜ್ಯ ಸರ್ಕಾರ ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ನೀಡುವ ಕುರಿತು ಇಂದು ನಿರ್ಧಾರಕ್ಕೆ ಬರಲಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸಂಜೆ 6 ಗಂಟೆಗೆ ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಕೋವಿಡ್ ಸ್ಥಿತಿಗತಿ ಅವಲೋಕನ ಮಾಡಲಿರುವ ಸಿಎಂ, ಶ್ರಮಿಕ ವರ್ಗಕ್ಕೆ ನೆರವು ಅಥವಾ ಪ್ಯಾಕೇಜ್ ನೀಡುವ ಕುರಿತು ಸಮಾಲೋಚನೆ ನಡೆಸಲಿದ್ದಾರೆ. ಸದ್ಯಕ್ಕೆ 14 ದಿನಗಳ ಸೀಮಿತ ಅವಧಿಗೆ ಲಾಕ್ ಡೌನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಪ್ಯಾಕೇಜ್ ಅಗತ್ಯವಿದೆಯಾ ಎನ್ನುವ ಕುರಿತು ಚರ್ಚೆ ನಡೆಸಲಾಗುತ್ತದೆ.
ಕಳೆದ ಬಾರಿ ಕಾರ್ಮಿಕರು, ಚಾಲಕರು, ಕಟ್ಟಡ ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಶ್ರಮಿಕ ವರ್ಗಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಆದರೆ, ಈ ಬಾರಿ ಯಾವ ರೀತಿಯ ನೆರವಿಗೆ ಸರ್ಕಾರ ಮುಂದಾಗಬೇಕು ಎನ್ನುವ ಕುರಿತು ಇಂದಿನ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.
ಬಿಪಿಎಲ್ ಕಾರ್ಡುದಾರರಿಗೆ ಯಾವುದಾದರೂ ಮಾದರಿಯ ನೆರವು ನೀಡುವುದು, ಶ್ರಮಿಕ ವರ್ಗಕ್ಕೆ ಪ್ಯಾಕೇಜ್ ಅಥವಾ ನೆರವು ಯಾವ ಸ್ವರೂಪದಲ್ಲಿರಬೇಕು, ಎಷ್ಟು ಪ್ರಮಾಣದಲ್ಲಿರಬೇಕು, ಯಾರನ್ನೆಲ್ಲಾ ಸೇರಿಸಬೇಕು ಎಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.