ಕರ್ನಾಟಕ

karnataka

ETV Bharat / city

ಆರ್ಥಿಕ ಸಂಕಷ್ಟದ ಎಫೆಕ್ಟ್; ಜನ ಕಲ್ಯಾಣ ಯೋಜನೆಗಳ ಅನುದಾನಗಳಿಗೆ ಕತ್ತರಿ! - ರಾಜ್ಯ ಬಿಜೆಪಿ ಸರ್ಕಾರ

ಆರ್ಥಿಕ ಸಂಕಷ್ಟ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿದೆ. ಆರ್ಥಿಕ ಬಿಕ್ಕಟ್ಟಿನಿಂದ ಹೊಸ ಯೋಜನೆಗಳನ್ನು ಸ್ಥಗಿತಗೊಳಿಸಿದ್ದರೆ, ಇನ್ನು ಹಲವು ಇಲಾಖೆಗಳ ಅನುದಾನ‌ ಬಿಡುಗಡೆಯಲ್ಲಿ ಭಾರೀ ಕಡಿತವಾಗಿದೆ. ಯಾವ ಇಲಾಖೆಗೆ ಎಷ್ಟು ಅನುದಾನ ಕಡಿತವಾಗಿದೆ ಎಂಬ ಸಮಗ್ರ ವರದಿ ಇಲ್ಲಿದೆ.

Economic crisis effect; karnataka govt cuts grants
ಆರ್ಥಿಕ ಸಂಕಷ್ಟದ ಎಫೆಕ್ಟ್; ಜನ ಕಲ್ಯಾಣ ಯೋಜನೆಗಳ ಅನುದಾನಗಳಿಗೆ ಕತ್ತರಿ!

By

Published : Dec 15, 2020, 5:00 AM IST

ಬೆಂಗಳೂರು:ಈ ಬಾರಿ ರಾಜ್ಯ ಹಿಂದೆಂದೂ ಕಾಣದ ಆರ್ಥಿಕ ಮುಗ್ಗಟ್ಟು ಕಂಡಿದೆ. ಲಾಕ್‌ಡೌನ್ ರಾಜ್ಯದ ಬೊಕ್ಕಸವನ್ನೇ ಹಿಂಡಿ‌ ಹಿಪ್ಪೆಯಾಗಿಸಿದೆ. ಸಂಪನ್ಮೂಲ ಕ್ರೋಢೀಕರಣ ಕುಂಠಿತ, ಜಿಎಸ್ ಟಿ ಪರಿಹಾರ ಕಡಿತ ಹಾಗೂ ಕೇಂದ್ರದ ತೆರಿಗೆ ಪಾಲಿನಲ್ಲಿನ ಕಡಿತ ರಾಜ್ಯದ ಬೊಕ್ಕಸದ ಮೇಲೆ ಭಾರೀ ಹೊರೆ ಬೀಳಿಸಿದೆ. ಇದರ ಪರಿಣಾಮದಿಂದ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಇಲಾಖೆ ಮೇಲೂ ಬಿದ್ದಿದೆ.

ಕಡಿಮೆ ಅನುದಾನ ಬಿಡುಗಡೆ ಗೊಳಿಸುವ ಮೂಲಕ ಇಲಾಖೆಗಳ ಕಾರ್ಯಕ್ರಮ ‌ಅನುಷ್ಠಾನಕ್ಕೆ ತೀವ್ರ ಹಿನ್ನಡೆಯಾಗಿದೆ. ಜನರ ಕಲ್ಯಾಣವನ್ನು ಅನುಷ್ಠಾನಗೊಳಿಸುವ ಈ ಪ್ರಮುಖ ಇಲಾಖೆಗಳಿಗೆ ಕಳೆದ ವರ್ಷದ ಅಕ್ಟೋಬರ್ ವರೆಗೆ ರೂ.16,207.51 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದರೆ, ಈ ವರ್ಷ ಕೇವಲ 7,091.06 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದರೆ ರಾಜ್ಯದ ಹಣಕಾಸು ಪರಿಸ್ಥಿತಿಯ ಭೀಕರತೆ ಗೊತ್ತಾಗುತ್ತದೆ.

ಯಾವ ಇಲಾಖೆಗಳಲ್ಲಿ ಎಷ್ಟು ಕಡಿತ?

ವಸತಿ ಇಲಾಖೆ 470 ಕೋಟಿ ರೂಪಾಯಿ

ಸಹಕಾರ ಇಲಾಖೆ 3,902.66 ಕೋಟಿ ರೂ.

ಸಮಾಜ ಕಲ್ಯಾಣ ಇಲಾಖೆ 248.58 ಕೋಟಿ ರೂ.

ಪ.ವರ್ಗಗಳ ಕಲ್ಯಾಣ ಇಲಾಖೆ 80.47 ಕೋಟಿ ರೂ.

ಹಿಂ.ವರ್ಗಗಳ ಕಲ್ಯಾಣ ಇಲಾಖೆ 381.21 ಕೋಟಿ ರೂ.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 346.64 ಕೋಟಿ ರೂ.

ವಿಪತ್ತು ನಿರ್ವಹಣೆಯಲ್ಲಿ 2,423‌.22 ಕೋಟಿ ರೂ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 244.61 ಕೋಟಿ ರೂ.

ಅತಿ ಹೆಚ್ಚು ಅನುದಾನ ಕಡಿತ ಎಲ್ಲಿ?

ಅಲ್ಪಸಂಖ್ಯಾತ, ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ನೀಡುತ್ತಿದ್ದ ಅನುದಾನವನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ. ನ.10 ರಂದು ಅಲ್ಪಸಂಖ್ಯಾತರ ಇಲಾಖೆಯಿಂದ ಹೊರಡಿಸಿದ ಆದೇಶದ ಪ್ರಕಾರ ಪಿಎಚ್.ಡಿ. ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 2 ವರ್ಷದ ಅವಧಿಗೆ ಮಾತ್ರ ಮಾಹೆಯಾನ 25,000 ರೂ. ಮತ್ತು ಪ್ರತಿ ವರ್ಷ ಒಂದು ಬಾರಿಗೆ 10,000 ರೂ. ನಿರ್ವಹಣಾ ವೆಚ್ಚವನ್ನು ಫೆಲೋಶಿಫ್ ಮೂಲಕ ನೀಡಬೇಕು. ಅದರ ಬದಲಾಗಿ ಪಿಎಚ್.ಡಿ. ವ್ಯಾಸಾಂಗ ಮಾಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಾರ್ಷಿಕ 1 ಲಕ್ಷ ರೂ.ಗೆ ಕಡಿತಗೊಳಿಸಲಾಗಿದೆ. ಅಂದರೆ ತಿಂಗಳಿಗೆ 25,000 ರೂ. ಬದಲಿಗೆ 8,250 ರೂ. ಮಾತ್ರ ನೀಡಲು ಆದೇಶ ಮಾಡಲಾಗಿದೆ. 2019-20ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿ ವೇತನಕ್ಕಾಗಿ 7,125 ಕೋಟಿ ರೂ. ಬಜೆಟ್‌ನಲ್ಲಿ ಬೇಡಿಕೆ ಇದ್ದರೆ, ನೀಡಿದ್ದು ಕೇವಲ 2,926.82 ಕೋಟಿ ರೂ. ಮಾತ್ರ. ಇದರಿಂದಾಗಿ 4,198.18 ಕೋಟಿ ರೂ. ಕೊರತೆಯಾಯಿತು. ಇತರೆ ಹಿಂದುಳಿದ ವರ್ಗಗಳ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನಕ್ಕಾಗಿ 2,500 ಕೋಟಿ ರೂ.ಗಳಷ್ಟು ಬೇಡಿಕೆ ಇದ್ದರೆ, ನೀಡಿದ್ದು 1,360 ಕೋಟಿ ರೂ. ಮಾತ್ರ. ಅಂದರೆ 1,140 ಕೋಟಿ ರೂ. ಕೊರತೆಯಾಗಿದೆ.

ABOUT THE AUTHOR

...view details