ದೊಡ್ಡಬಳ್ಳಾಪುರ: ಶ್ರಾವಣ ಮಾಸ ಪ್ರಾರಂಭವಾಗಿದೆ. ಹಬ್ಬಗಳು ಸಾಲು ಸಾಲಾಗಿ ಬರಲಿವೆ. ಅದರಲ್ಲೂ ಸಂಭ್ರಮ ಸಡಗರದ ಗಣೇಶನ ಹಬ್ಬಕ್ಕೆ ಇನ್ನೊಂದು ತಿಂಗಳಷ್ಟೇ ಬಾಕಿ. ಈಗಾಗಲೇ ಗಣೇಶ ಮೂರ್ತಿಗಳ ತಯಾರಿಕೆ ಭರದಿಂದ ಶುರುವಾಗಿದೆ.
ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣಪನ ತ್ಯಜಿಸಿ ಪರಿಸರಸ್ನೇಹಿ ಗಣಪನಿಗೆ ಇತ್ತೀಚೆಗೆ ಪ್ರಾಶಸ್ತ್ಯ ಹೆಚ್ಚುತ್ತಿದೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ ಗುಂಡಮಗೆರೆ ಹೊಸಹಳ್ಳಿಯ ಆದಿನಾರಾಯಣ್ ಎಂಬುವವರು ಮರಗೆಣಸು ಪುಡಿಯಿಂದ ವಿಶೇಷವಾದ ಪರಿಸರ ಸ್ನೇಹಿ ಗಣೇಶನ ವಿಗ್ರಹ ತಯಾರಿಸುತ್ತಿದ್ದಾರೆ.
ಸ್ವಂತ ಕುಂಬಾರಿಕೆ ವೃತ್ತಿ ಮಾಡುವ ಆದಿನಾರಾಯಣ್ ಕಳೆದ 20 ವರ್ಷಗಳಿಂದ ಗಣೇಶ ಮೂರ್ತಿಗಳ ತಯಾರಿಕೆ ಮಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಪರಿಸರಸ್ನೇಹಿ ಗಣೇಶನ ಮೂರ್ತಿಗಳ ತಯಾರಿಸುತ್ತಿರುವ ಇವರು ಮರಗೆಣಸಿನ ಪುಡಿಯಿಂದ ವಿವಿಧ ವಿನ್ಯಾಸದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಇವರು ತಯಾರಿಸುವ ಈ ಮರಗೆಣಸಿನ ಪುಡಿಯ ಗಣಪ ನೀರಿನಲ್ಲಿ ಸುಲಭವಾಗಿ ಕರಗುತ್ತಾನೆ. ಅದಲ್ಲದೆ ಕರಗಿದ ಮೇಲೆ ಜಲಚರ ಜೀವಿಗಳಿಗೂ ಆಹಾರವಾಗುತ್ತಾನೆ.
ಕೇರಳದಿಂದ ಬರುವ ಮರಗೆಣಸಿನ ಪುಡಿಯಿಂದ ಮೂರ್ತಿಗಳನ್ನು ತಯಾರಿಕೆ ಮಾಡಲಾಗುವುದು. ಮೊದಲಿಗೆ ನೀರಿಗೆ ಪುಡಿಯನ್ನು ಹಾಕಿ ಪೆಸ್ಟ್ ರೀತಿಯಲ್ಲಿ ಬೇಯಿಸಬೇಕು. ಒಂದು ದಿನದ ನಂತರ ಮರಗೆಣಸಿನ ಪೆಸ್ಟ್ ಅನ್ನು ಪೇಪರ್ಗೆ ಮೆತ್ತುವ ಮೂಲಕ ವಿಗ್ರಹದ ರೂಪ ಕೊಡಲಾಗುವುದು. ಚೆನ್ನಾಗಿ ಒಣಗಿದ ನಂತರ ಬಣ್ಣ ಬಳಿಯಲಾಗುವುದು. ಹೂವುಗಳಿಂದ ತಯಾರಿಸಲಾದ ನೈಸಗಿಕ ಬಣ್ಣಗಳನ್ನು ವಿಗ್ರಹ ಅಲಂಕಾರಕ್ಕೆ ಬಳಸಲಾಗುವುದು. ಒಂದು ವಿಗ್ರಹ ತಯಾರಿಸಲು ನಾಲ್ಕು ದಿನ ಬೇಕಾಗುತ್ತದೆ. ಮರಗೆಣಸಿನ ಪುಡಿಯಿಂದ ತಯಾರಿಸಿದ ಗಣೇಶನ ಮೂರ್ತಿಗಳಿಗೆ ಸಾಮಾನ್ಯ ಮೂರ್ತಿಗಳಿಗಿಂತ ಬೆಲೆ ಹೆಚ್ಚಾಗಿಯೇ ಇರುತ್ತದೆ.