ಬೆಂಗಳೂರು:ರಾಜ್ಯದಲ್ಲಿ ಸ್ವಸಹಾಯ ಗುಂಪುಗಳು ಉತ್ಪಾದಿಸುತ್ತಿರುವ ಉತ್ಪನ್ನಗಳ ಇ-ಮಾರಾಟಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಅಮೆಜಾನ್ ಕಂಪನಿ ಭರವಸೆ ನೀಡಿದೆ.
ಅಮೆಜಾನ್ ಕಂಪನಿ ಉಪಾಧ್ಯಕ್ಷ (ಸಾರ್ವಜನಿಕ ಕಾರ್ಯನೀತಿ ವಿಭಾಗ) ಚೇತನ್ ಕೃಷ್ಣಸ್ವಾಮಿ ಅವರೊಂದಿಗೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ನಡೆಸಿದ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಲಾಯಿತು. ಉಪಮುಖ್ಯಮಂತ್ರಿಯವರ ಮನವಿಗೆ ಸ್ಪಂದಿಸಿದ ಚೇತನ್ ಕೃಷ್ಣಸ್ವಾಮಿ ಅವರು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸ್ವಸಹಾಯ ಗುಂಪುಗಳಿಗೆ ಅಮೆಜಾನ್, ಇ- ಮಾರುಕಟ್ಟೆ ವೇದಿಕೆಯನ್ನು ಒದಗಿಸಲಿದೆ ಎಂದರು.
ರಾಜ್ಯದಲ್ಲಿ ಸುಮಾರು 1.5 ಲಕ್ಷ ಸ್ವಸಹಾಯ ಗುಂಪುಗಳಿವೆ. ಇವುಗಳು ವಿವಿಧ ಉತ್ಪನ್ನಗಳ ತಯಾರಿಕೆ, ಸಿದ್ಧಪಡಿಸುವಿಕೆ ಹಾಗೂ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಈ ಉತ್ಪನ್ನಗಳಿಗೆ ಎಲೆಕ್ಟ್ರಾನಿಕ್ ವ್ಯಾಪಾರ ವೇದಿಕೆಗಳ ಮೂಲಕ ಮಾರಾಟಕ್ಕೆ ಅನುವು ಮಾಡಿಕೊಡುವುದು ಸೂಕ್ತ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಅಭಿಪ್ರಾಯಪಟ್ಟರು.
ಇದೇ ವೇಳೆ ಚೇತನ್ ಕೃಷ್ಣಸ್ವಾಮಿ ಮಾತನಾಡಿ, ಅಮೆಜಾನ್ ಕಂಪನಿಯು ಭಾರತದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುವ ಯೋಜನೆಗಳನ್ನು ಹೊಂದಿದೆ. ಪೂರೈಕೆ ಸರಪಳಿ, ದಾಸ್ತಾನು ಘಟಕ ಮತ್ತಿತರ ವಿಭಾಗಗಳಲ್ಲಿ ಗ್ರಾಮೀಣ ಹಾಗೂ ಸ್ಥಳೀಯ ಯುವ ಜನತೆಗೆ ಹೆಚ್ಚಿನ ಉದ್ಯೋಗ ನೀಡುವ ಉದ್ದೇಶ ಹೊಂದಿದೆ. ಜೊತೆಗೆ ಸಂಸ್ಥೆಯ ಸಿಬ್ಬಂದಿಗೆ ಕಾಲಕಾಲಕ್ಕೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಒತ್ತು ಕೊಡಲಾಗುತ್ತದೆ ಎಂದು ತಿಳಿಸಿದರು.