ಕರ್ನಾಟಕ

karnataka

ETV Bharat / city

ಆನ್​ಲೈನ್ ವಂಚನೆಗೆ ಇ ಕಾಮರ್ಸ್ ಸಂಸ್ಥೆ ಹೊಣೆಯಲ್ಲ: ಹೈಕೋರ್ಟ್ - E-commerce not responsible for online fraud

ಇ ಕಾಮರ್ಸ್ ಸಂಸ್ಥೆ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಮಧ್ಯವರ್ತಿಯಾಗಿ ಅಷ್ಟೇ ಕೆಲಸ ಮಾಡುತ್ತಿದೆ. ವೆಬ್​ಸೈಟ್ ಮೂಲಕ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಬಗ್ಗೆ ಸಂಸ್ಥೆ ತಿಳಿದಿರಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಹೈಕೋರ್ಟ್
ಹೈಕೋರ್ಟ್

By

Published : Jan 12, 2021, 8:41 PM IST

ಬೆಂಗಳೂರು:ಆನ್​ಲೈನ್ ಮೂಲಕ ಮಾರಾಟಗಾರರು ಗ್ರಾಹಕರಿಗೆ ವಂಚನೆ ಮಾಡಿದರೆ ಅದಕ್ಕೆ ವಹಿವಾಟು ವೇದಿಕೆ ಕಲ್ಪಿಸಿದ ಇ-ಕಾಮರ್ಸ್ ಸಂಸ್ಥೆಗಳು ಜವಾಬ್ದಾರರಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸ್ನ್ಯಾಪ್ ಡೀಲ್ ಸಂಸ್ಥೆ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸುವ ವೇಳೆ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸ್ನ್ಯಾಪ್ ಡೀಲ್ ಸಂಸ್ಥೆಯ ವೆಬ್​​ಸೈಟ್​ನಲ್ಲಿ ಜಾಹೀರಾತು ಪ್ರದರ್ಶಿಸಿದ್ದ ಉತ್ಪನ್ನವೊಂದು ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆಗೆ ವಿರುದ್ಧವಾಗಿದೆ ಎಂದು ಆರೋಪಿಸಿ ಮೈಸೂರಿನ ಉಪ ಔಷಧ ನಿಯಂತ್ರಕರು ಸಂಸ್ಥೆ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ವೇಳೆ ಸ್ನ್ಯಾಪ್ ಡೀಲ್ ಪರ ವಾದಿಸಿದ್ದ ಹಿರಿಯ ವಕೀಲರು, ಇ ಕಾಮರ್ಸ್ ಸಂಸ್ಥೆಯಾಗಿರುವ ಸ್ನ್ಯಾಪ್ ಡೀಲ್ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಮಧ್ಯವರ್ತಿಯಾಗಿ ಅಷ್ಟೇ ಕೆಲಸ ಮಾಡುತ್ತಿದೆ. ಹೀಗಾಗಿ ಸಂಸ್ಥೆಯು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79ರ ಪ್ರಕಾರ ಹೊಣೆಗಾರಿಕೆಯಿಂದ ವಿನಾಯಿತಿ ಪಡೆಯಲು ಅರ್ಹವಾಗಿದೆ ಎಂದಿದ್ದರು.

ವಾದ ಪುರಸ್ಕರಿಸಿರುವ ಪೀಠ, ವೆಬ್​ಸೈಟ್ ಮೂಲಕ ಮಾರಾಟವಾಗುವ ಎಲ್ಲಾ ಉತ್ಪನ್ನಗಳ ಬಗ್ಗೆ ಇ ಕಾಮರ್ಸ್ ಸಂಸ್ಥೆ ತಿಳಿದಿರಬೇಕು ಎಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಪ್ರಕರಣ ರದ್ದುಪಡಿಸಿ ಆದೇಶಿಸಿದೆ.

ABOUT THE AUTHOR

...view details