ನವದೆಹಲಿ/ಬೆಂಗಳೂರು:ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವಿದ್ದು, ಕೈಗಾರಿಕೆಗಳು, ಕೋವಿಡ್ -19ನಿಂದ ಬಾಧಿತವಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಪ್ರಕಟಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಆತ್ಮನಿರ್ಭರ್ ಭಾರತ ವಿಶೇಷ ಪ್ಯಾಕೇಜ್ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ಕರೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಗುರುವಾರ ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಸಲಹಾ ವೇದಿಕೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಸದಾನಂದಗೌಡ, ಭಾರತ ಸರ್ಕಾರ ಕಳೆದ 2014ರಿಂದಲೂ ದೇಶದಲ್ಲಿ ಸುಗಮ ವಾಣಿಜ್ಯ ನಡೆಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರ ಫಲವಾಗಿ ವಿಶ್ವ ಬ್ಯಾಂಕ್ ವರದಿಯಲ್ಲಿ ಭಾರತ 2017ರಲ್ಲಿದ್ದ 130ನೇ ಸ್ಥಾನದಿಂದ 63ನೇ ಶ್ರೇಯಾಂಕ ಪಡೆದಿದೆ ಎಂದರು.
ರಾಸಾಯನಿಕ ಮತ್ತು ಪೆಟ್ರೋ ರಾಸಾಯನಿಕ ಇಲಾಖೆ ಕಳೆದ ಒಂದು ವರ್ಷಗಳ ಅವಧಿಯಲ್ಲಿ ವಲಯದ ಕ್ರಮಬದ್ಧ ಅಭಿವೃದ್ಧಿಗೆ ಬೆಂಬಲ ನೀಡಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬಿಐಎಸ್ ಮಾನದಂಡವನ್ನು 19 ರಾಸಾಯನಿಕ ಮತ್ತು 5 ಪೆಟ್ರೋ ರಾಸಾಯನಿಕಗಳಿಗೆ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಸಂಸ್ಥೆಗಳು 55 ರಾಸಾಯನಿಕಗಳ ದಾಸ್ತಾನಿನ ವೇಳೆ ಸ್ಥಳೀಯ ಉತ್ಪಾದಕರಿಗೆ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಿ ಸಾರ್ವಜನಿಕ ದಾಸ್ತಾನು ಆದೇಶಗಳ ಅಧಿಸೂಚನೆ ಹೊರಡಿಸಲಾಗಿದೆ. ಅತಿ ಹೆಚ್ಚಿನ ಮೌಲ್ಯ ರಾಸಾಯನಿಕ ಇತ್ಯಾದಿಗಳ ಮಾರಾಟಕ್ಕೆ ಪ್ರತ್ಯೇಕ ಎಚ್.ಎಸ್. ಕೋಡ್ ಪಡೆಯುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.