ಕರ್ನಾಟಕ

karnataka

By

Published : Jun 26, 2022, 8:52 AM IST

ETV Bharat / city

ಇಂದಿರಾ ಗಾಂಧಿ ಅಧಿಕಾರ ಲಾಲಸೆಯಿಂದ ತುರ್ತು ಪರಿಸ್ಥಿತಿ ಹೇರಿದ್ದರು: ಡಿವಿಎಸ್

1975ರಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಸುಮಾರು 21 ತಿಂಗಳ ಕಾಲ ಜಾರಿಯಲ್ಲಿತ್ತು. ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳೂ ಕೂಡಾ ವಿರೋಧಿಸಿದ್ದರು ಎಂದು ಕೇಂದ್ರ ಲೋಕಸಭಾ ಸಂಸದ ಡಿ.ವಿ.ಸದಾನಂದ ಗೌಡ ಹೇಳಿದರು.

DV Sadananda Gowda Slams Congress
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ

ಬೆಂಗಳೂರು: ಇಂದಿರಾ ಗಾಂಧಿ ಅವರು ಪ್ರಧಾನಿಯಾದ ಬಳಿಕ ಸಂವಿಧಾನದ ಪರಿಚ್ಛೇದಗಳಿಗೆ ಗೌರವ ಕೊಡಲಿಲ್ಲ. ತುರ್ತು ಪರಿಸ್ಥಿತಿ ದೇಶದ ದುರ್ದೈವ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಶನಿವಾರ ನಗರದಲ್ಲಿ ಬಿಜೆಪಿ ಬೆಂಗಳೂರು ಮಹಾನಗರದ ವತಿಯಿಂದ ಏರ್ಪಡಿಸಿದ್ದ 'ತುರ್ತು ಪರಿಸ್ಥಿತಿಗೆ' ಸಂಬಂಧಿಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1975ರಲ್ಲಿ ಸುಮಾರು 21 ತಿಂಗಳ ಕಾಲ ತುರ್ತು ಪರಿಸ್ಥಿತಿ ಹೇರಲಾಯಿತು. ಆ ದಿನಗಳು ಮತ್ತೆಂದೂ ಬರಬಾರದು. ಅದಕ್ಕಾಗಿಯೇ ಆ ಕರಾಳ ದಿನಗಳನ್ನು ಮತ್ತೆ ನೆನಪಿಸಲಾಗುತ್ತಿದೆ ಎಂದರು.

ಆ ಸಂದರ್ಭದಲ್ಲಿ ಅನೇಕ ಹೋರಾಟಗಾರರು, ಅಂದಿನ ವಿರೋಧ ಪಕ್ಷದ ಮುಖಂಡರು ಜೈಲಿನಲ್ಲಿದ್ದರು. ಆದ್ದರಿಂದ ಇಂದು ಜೈಲನ್ನು ಸಂದರ್ಶಿಸಲಾಯಿತು. ಇಂಥದ್ದನ್ನು ವಿರೋಧಿಸಲು ಪ್ರೇರಣೆ ಇಲ್ಲಿ ಲಭಿಸಿದೆ. ಸ್ವಾತಂತ್ರ್ಯಾನಂತರ ಪ್ರಧಾನಿ ನೆಹರು ಅವರ ಆಡಳಿತ ನಡೆದಿದೆ. ಅದು ರಾಷ್ಟ್ರೀಯ ಸಂಸ್ಕೃತಿಗೆ ವಿರುದ್ಧವಾಗಿತ್ತು. ದೇಶೀಯ ವಿಚಾರಕ್ಕೆ ಒತ್ತು ಕೊಡಲಿಲ್ಲ. ವಿದೇಶೀಯರ ವಿಚಾರದ ಆಧಾರದಲ್ಲಿ ಆಡಳಿತ ನಡೆಸಲಾಯಿತು. ಇದನ್ನು ಆಕ್ಷೇಪಿಸಿ ಅಂದಿನ ದಿನಗಳಲ್ಲಿ ಡಾ. ಶ್ಯಾಮ್​​ ಪ್ರಸಾದ್ ಮುಖರ್ಜಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.

ಇಂದಿರಾ ಗಾಂಧಿಯವರು ಅಧಿಕಾರ ಲಾಲಸೆಯಿಂದ ಇಲ್ಲಸಲ್ಲದ ಕಾರಣ ನೀಡಿ ತುರ್ತು ಪರಿಸ್ಥಿತಿ ಹೇರಿದ್ದರು. ಪ್ರತಿರೋಧ ತೋರದಂತೆ ಅನೇಕರನ್ನು ಜೈಲಿಗೆ ಕಳುಹಿಸಲಾಯಿತು. ಅಂದಿನ ರಾಷ್ಟ್ರಪತಿಯಾಗಿ ಫಕ್ರುದ್ದೀನ್ ಅಲಿ ಅವರು ಕೂಡಾ ಇದು ದೇಶದ ದುರ್ದೈವ ಎಂದು ವಿವರಿಸಿದರು. ಕಾನೂನಿಗೂ ತಿದ್ದುಪಡಿ ತರಲಾಯಿತು. ಆರ್​ಎಸ್​ಎಸ್​​ ಸೇರಿ ದೇಶಪ್ರೇಮಿ ಸಂಘಟನೆಗಳಿಗೆ ನಿಷೇಧ ಹೇರಲಾಗಿತ್ತು. ತುರ್ತು ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿಗಳು ಸಹ ವಿರೋಧಿಸಿದ್ದು, ಅವರಿಗೂ ಅನ್ಯಾಯ ಮಾಡಲಾಗಿತ್ತು.

1977ರಲ್ಲಿ ಅನಿವಾರ್ಯವಾಗಿ ಚುನಾವಣೆ ಘೋಷಿಸಿದಾಗ ಜೈಲಿನಲ್ಲಿದ್ದ ಎಲ್ಲ ಹಿರಿಯರು ಹೊರಬಂದು ಒಂದು ಒಕ್ಕೂಟ ರಚಿಸಿ ಜನತಾ ಪಕ್ಷದ ರಚನೆ ಮಾಡಿದರು. ಆ ಚುನಾವಣೆಯಲ್ಲಿ ಜನತಾ ಪಕ್ಷ ಗರಿಷ್ಠ ಸ್ಥಾನ ಪಡೆದು ಅಧಿಕಾರ ಪಡೆದು ಕರಾಳ ಛಾಯೆಗೆ ಮುಕ್ತಿ ಕೊಟ್ಟಿತು.

47 ವರ್ಷಗಳ ಹಿಂದೆ ಈ ದೇಶದಲ್ಲಿ ಸ್ವಾತಂತ್ರ್ಯ ಹರಣ ಆಗಿತ್ತು. 1947ರವರೆಗೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದರು. ಸ್ವಾಭಿಮಾನಿ, ಸ್ವತಂತ್ರ ಭಾರತಕ್ಕಾಗಿ ನಮ್ಮ ಹಿರಿಯರು ಮಾಡಿದ ಹೋರಾಟದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಭಾರತಕ್ಕೆ ಎಂದಿಗೂ ಗುಲಾಮಗಿರಿ ಬರಬಾರದು ಎಂಬ ಆಶಯ ಹಿರಿಯರಲ್ಲಿತ್ತು. ಅದಕ್ಕಾಗಿ ಡಾ. ಬಾಬಾ ಸಾಹೇಬ್​ ಅಂಬೇಡ್ಕರ ಅವರ ಪ್ರಯತ್ನದಿಂದ ಅತ್ಯುತ್ತಮ ಸಂವಿಧಾನ ನಮಗೆ ಲಭಿಸಿತ್ತು. ಅದು ಜಗತ್ತಿನ ಶ್ರೇಷ್ಠ ಸಂವಿಧಾನ ಎಂದರು.

ಇದನ್ನೂ ಓದಿ:ತುರ್ತು ಪರಿಸ್ಥಿತಿ ವೇಳೆ ಇಡೀ ದೇಶ ಜಾತಿ‌-ಮತ-ಪಂಥ ಮರೆತು ಒಂದಾಗಿತ್ತು: ಸಿಎಂ ಬೊಮ್ಮಾಯಿ

ABOUT THE AUTHOR

...view details