ಬೆಂಗಳೂರು: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ನಾಣ್ಣುಡಿಯಂತೆ ಪ್ರತಿ ವರ್ಷ ಬೇವು ಬೆಲ್ಲದ ಸವಿದು ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದ ಜನರಿಗೆ ಕೊರೊನಾ ಮುಳ್ಳಾಗಿದ್ದು, ಸತತ ಎರಡನೇ ವರ್ಷವೂ ಹಬ್ಬದ ಸಂಭ್ರಮಕ್ಕೆ ಮಹಾಮಾರಿ ಕೋವಿಡ್ ತಣ್ಣೀರೆರಚಿದೆ.
ಉದ್ಯೊಗ ಅರಸಿ ಲಕ್ಷಾಂತರ ಜನರು ಹಳ್ಳಿಗಳಿಂದ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ದಾರೆ. ಹಬ್ಬಗಳಂದು ಬಹುತೇಕ ನಗರವಾಸಿಗಳು ತಮ್ಮೂರು, ಹಳ್ಳಿಗಳಿಗೆ ತೆರಳಿ ಹಬ್ಬಾಚರಿಸುತ್ತಾರೆ. ವಿಶೇಷವಾಗಿ ಯುಗಾದಿಗೆ ಇಡೀ ಕುಟುಂಬ ಒಟ್ಟಿಗೆ ಸೇರಿ ಪರಸ್ಪರ ಬೇವು ಬೆಲ್ಲ ಹಂಚಿಕೊಂಡು ಸಂಭ್ರಮಿಸುತ್ತಾರೆ. ಆದರೆ ಈ ಬಾರಿಯ ಯುಗಾದಿ ಸಂಭ್ರಮಕ್ಕೂ ಕೊರೊನಾ ಅಡ್ಡಿಯಾಗಿದೆ. ಕಳೆದ ವರ್ಷ ಕೊರೊನಾ, ಈ ಬಾರಿ ಎರಡನೇ ಅಲೆ ಯುಗಾದಿ ಆಚರಣೆಗೆ ಕಹಿಯಾಗಿ ಪರಿಣಮಿಸಿದೆ.
ಕಳೆದ ಬಾರಿ ಕೋವಿಡ್-19 ಲಾಕ್ ಡೌನ್ ಘೋಷಣೆಯಾಗಿದ್ದ ಕಾರಣ ಸಿಲಿಕಾನ್ ಸಿಟಿಯಲ್ಲಿದ್ದ ಜನ ತಮ್ಮ ತಮ್ಮ ಊರುಗಳಿಗೆ ತೆರಳಲು ಸಾಧ್ಯವಾಗಲಿಲ್ಲ. ಅವರೆಲ್ಲ ಬಹುಶ: ಮೊದಲ ಬಾರಿ ಸಾಮೂಹಿಕವಾಗಿ ತಮ್ಮೂರಿಗೆ ತೆರಳಿ ಹಬ್ಬವನ್ನು ಆಚರಿಸುವುದರಿಂದ ದೂರ ಉಳಿಯಬೇಕಾಯಿತು. ಮನೆ ಮಂದಿಯೆಲ್ಲಾ ಕೂಡಿಕೊಂಡು ಬೇವು, ಮಾವಿನ ಎಲೆಗಳಿಂದ ಮನೆಯನ್ನು ಅಲಂಕರಿಸಿ ಬೇವು ಬೆಲ್ಲವನ್ನು ಹಂಚುತ್ತಾ ಊರು ಸುತ್ತಾಡುವ ಅವಕಾಶವನ್ನು ಕಳೆದುಕೊಂಡರು. ಕೊರೊನಾಗೆ ಹಿಡಿಶಾಪ ಹಾಕುತ್ತಾ ಬೆಂಗಳೂರಿನಲ್ಲೇ ಉಳಿದುಕೊಂಡರು.
ಈ ಬಾರಿಯ ವರ್ಷಾರಂಭದ ವಾತಾವರಣ ಕೊರೊನಾ ಸೋಂಕನ್ನು ಮರೆಸುವ ರೀತಿಯಲ್ಲಿತ್ತು. ಜೊತೆಗೆ ವ್ಯಾಕ್ಸಿನ್ ಕೂಡ ಲಭ್ಯವಿತ್ತು. ಹಾಗಾಗಿ ಈ ಬಾರಿಯ ಯುಗಾದಿ ಹಬ್ಬವನ್ನು ತಮ್ಮೂರುಗಳಲ್ಲಿ ಆಚರಿಸುವ ನಿರೀಕ್ಷೆ ಹೊತ್ತ ಬೆಂಗಳೂರಿಗರು ತಮ್ಮ ತಮ್ಮ ಹಳ್ಳಿಗಳಿಗೆ ತೆರಳುವ ತವಕದಲ್ಲಿದ್ದರು. ಆದರೆ ಈ ಬಾರಿಯೂ ಕೊರೊನಾ ಎರಡನೇ ಅಲೆ ಎದುರಾಗಿ ಹೊಸ ಆತಂಕ ಸೃಷ್ಟಿಸಿದೆ.
ಸಾರಿಗೆ ಮುಷ್ಕರವೂ ಒಂದು ಕಾರಣ