ಬೆಂಗಳೂರು:ಮಾದಕ ದಂಧೆಕೋರರ ವಿರುದ್ಧ ಬೆಂಗಳೂರು ಪೊಲೀಸರ ಸಮರ ಮುಂದುವರೆದಿದ್ದು, ಕೆ.ಜಿ.ಗಟ್ಟಲೇ ಮಾದಕ ಪದಾರ್ಥ ಸಂಗ್ರಹಿಸಿಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಯಲಹಂಕ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೈಜೀರಿಯಾ ಮೂಲದ ಜಾನ್ ಅಬ್ರಾಹಂ ಎಂದು ಗುರುತಿಸಲಾಗಿದೆ.
ಯಲಹಂಕ ಠಾಣಾ ವ್ಯಾಪ್ತಿಯ ಪಾಲನಹಳ್ಳಿ ತೋಟದ ಮನೆಯಲ್ಲಿ ಮಾದಕ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಆರೋಪಿ, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು. ದಂಧೆ ಕುರಿತು ಖಚಿತ ಮಾಹಿತಿಯೊಂದಿಗೆ ಆರೋಪಿ ವಾಸವಿದ್ದ ಮನೆಯ ಮೇಲೆ ದಾಳಿ ನಡೆಸಿದ ಯಲಹಂಕ ಠಾಣಾ ಪೊಲೀಸರು ಬಂಧಿತನಿಂದ 1.4 ಕೆ.ಜಿ. ಎಂಡಿಎಂಎ, 6 ಕೆ.ಜಿ. ಗಾಂಜಾ, 7 ಮೊಬೈಲ್ ವಶಕ್ಕೆ ಪಡೆದಿದ್ದಾರೆ.