ಬೆಂಗಳೂರು:ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ಬಗ್ಗೆ ರಾಜ್ಯಮಟ್ಟದಲ್ಲಿ ತೀವ್ರ ಚರ್ಚೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಜೈಲಿನಲ್ಲಿ ಗಾಂಜಾ ಘಮಲಿನ ವಾಸನೆ ಕೇಳಿ ಬಂದಿದೆ. ಆದರೆ, ಈ ಬಾರಿ ಸಿಕ್ಕಿಬಿದ್ದಿದ್ದು ಪ್ರಥಮ ದರ್ಜೆ ಸಹಾಯಕ ಸಿಬ್ಬಂದಿ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಥಮ ದರ್ಜೆ ಸಹಾಯಕನಾಗಿರುವ 53 ವರ್ಷದ ಗಂಗಾಧರ್ ಎಂಬಾತನನ್ನು ಬಂಧಿಸಿದ ಜೈಲು ಅಧಿಕಾರಿಗಳು ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಒಳ ಉಡುಪಿನಲ್ಲಿತ್ತು ಹ್ಯಾಶ್ ಆಯಿಲ್: ಸೆಂಟ್ರಲ್ ಜೈಲಿನಲ್ಲಿ ಭದ್ರತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್ ಬುಧವಾರ ಬೆಳಗ್ಗೆ ಒಳ ಉಡುಪಿನಲ್ಲಿ ಎಲ್ಎಸ್ಡಿ ಹಾಗೂ ಹ್ಯಾಶ್ ಆಯಿಲ್ ಇಟ್ಟುಕೊಂಡು ಜೈಲಿನೊಳಗೆ ಸಾಗಿಸುವ ಯತ್ನದಲ್ಲಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಕೃತ್ಯ ಸಂಬಂಧ ಕ್ರಮ ಕೈಗೊಂಡಿರುವ ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್ ಮೋಹನ್ ಗಂಗಾಧರ್ನನ್ನು ಅಮಾನತು ಮಾಡಿದ್ದಾರೆ.