ಬೆಂಗಳೂರು: ಡ್ರಗ್ಸ್ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಟ ಸಿದ್ದಾಂತ್ ಕಪೂರ್ ಅವರನ್ನು ಜಾಮೀನಿನ ಮೇರೆಗೆ ಹಲಸೂರು ಪೊಲೀಸರು ನಿನ್ನೆ ರಾತ್ರಿ ಬಿಡುಗಡೆ ಮಾಡಿದ್ದರು. ಇಂದು ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ ಹಿನ್ನೆಲೆ, ಸಿದ್ದಾಂತ್ ಹಾಜರಾಗಿದ್ದಾರೆ.
ಮತ್ತೊಂದೆಡೆ ರೇವ್ ಪಾರ್ಟಿ ಆಯೋಜಕರು ಸೇರಿ ಹೋಟೆಲ್ ಮಾಲೀಕರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಈವೆಂಟ್ ಕಂಪನಿಗಳಾಗಿರುವ ಇಂಡಿವೈಬ್, ಎಲ್‌ಎ ಪ್ರೊಡಕ್ಷನ್ ಪ್ರತಿನಿಧಿಗಳು ಠಾಣೆಗೆ ಹಾಜರಾಗುವ ಸಾಧ್ಯತೆಯಿದೆ. ಎಷ್ಟು ವರ್ಷಗಳಿಂದ ಹೈ - ಎಂಡ್ ಪಾರ್ಟಿ ಆಯೋಜಿಸಿದ್ದರು?, ಪಾರ್ಟಿಗೆ ಈ ಹಿಂದೆ ಯಾವ ಯಾವ ಸೆಲಬ್ರೆಟಿಗಳಿಗೆ ಆಹ್ವಾನ ನೀಡಿದ್ದರು?, ಡ್ರಗ್ಸ್ ಪೆಡ್ಲಿಂಗ್ ಮಾಡಿದ್ದು ಯಾರು? ಎಂಬುದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ವಿಚಾರಣೆಗೆ ಹಾಜರಾದ ಸಿದ್ಧಾಂತ್ ಕಪೂರ್ ವಿಚಾರಣೆ ವೇಳೆ ಸಿದ್ದಾಂತ್ ಹೇಳಿದ್ದೇನು?: ಡ್ರಗ್ಸ್ ಜಾಲದಲ್ಲಿ ಸಿಲುಕಿಕೊಂಡು ಬಂಧನಕ್ಕೆ ಒಳಗಾಗಿದ್ದ ಸಿದ್ದಾಂತ್ ಕಪೂರ್ ನಿನ್ನೆ ನಡೆದ ಸುದೀರ್ಘ ವಿಚಾರಣೆಯಲ್ಲಿ ಹಲವು ಸಂಗತಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ನನಗೆ ಹಲವಾರು ಸ್ನೇಹಿತರಾಗಿದ್ದಾರೆ. ಈ ಹಿಂದೆ ನಗರದಲ್ಲಿ ನಡೆದಿದ್ದ ಪಾರ್ಟಿಗಳಲ್ಲಿ ಡಿಜೆಯಾಗಿ ಭಾಗಿಯಾಗಿದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ.
ಡ್ರಗ್ಸ್ ಸೇವನೆ ಬಗ್ಗೆ ಪೊಲೀಸರು ಕೇಳಿದ ಪ್ರಶ್ನೆಗೆ ಉತ್ತರಿಸಿ, ಡ್ರಗ್ಸ್ ಹೇಗೆ ಬಂತು ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಪಾರ್ಟಿಯಲ್ಲಿದ್ದ ಸ್ನೇಹಿತರು ನೀರಿನಲ್ಲಿ ಅಥವಾ ಸಿಗರೇಟ್ನಲ್ಲಿ ಡ್ರಗ್ಸ್ ಮಿಶ್ರಣ ಮಾಡಿ ನನಗೆ ಕೊಟ್ಟಿದ್ದಾರೆ. ಇದನ್ನ ಅರಿಯದೇ ನೀರು ಕುಡಿದು ಸಿಗರೇಟ್ ಸೇವನೆ ಮಾಡಿದ್ದೆ ಅಷ್ಟೇ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಭೀಮಾಶಂಕರ್ ಗುಳೇದ್ 5 ಮೊಬೈಲ್ ಜಪ್ತಿ.. ರಿಟ್ರೈವ್ ಮಾಡಲು ಎಫ್ಎಸ್ಎಲ್ಗೆ: ಸಿದ್ದಾಂತ್ ಸೇರಿದಂತೆ ಐವರನ್ನು ಬಂಧಿಸಿದ್ದ ಪೊಲೀಸರು ಒಟ್ಟು ಐದು ಮೊಬೈಲ್ಗಳನ್ನ ಜಪ್ತಿ ಮಾಡಿದ್ದಾರೆ. ಡ್ರಗ್ಸ್ ಪೆಡ್ಲಿಂಗ್ ಮಾಡಿರುವ ಆಯಾಮದಡಿ ತಾಂತ್ರಿಕವಾಗಿ ತನಿಖೆ ನಡೆಸುತ್ತಿರುವ ಪೊಲೀಸರು ಜಪ್ತಿ ಮಾಡಿಕೊಂಡಿರುವ ಐದು ಮೊಬೈಲ್ ಗಳನ್ನು ರಿಟ್ರೈವ್ ಮಾಡಲು ಎಫ್ಎಸ್ಎಲ್(ವಿಧಿವಿಜ್ಞಾನ ಪ್ರಯೋಗಾಲಯ) ಕಳುಹಿಸಿದ್ದಾರೆ.
ಸಿದ್ಧಾಂತ್ ಕಪೂರ್, ಡ್ರಗ್ಸ್ ಪೆಡ್ಲರ್ ಜತೆ ಸಂಪರ್ಕದಲ್ಲಿ ಇದ್ದಾರಾ? ಎಂಬುದರ ಬಗ್ಗೆ ವರದಿ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಗೋವಾ, ಕೇರಳ ಹಾಗೂ ಮುಂಬೈ ನಡೆದಿರುವ ಡ್ರಗ್ಸ್ ಪಾರ್ಟಿಯಲ್ಲಿ ಈತ ಭಾಗಿಯಾಗಿದ್ದಾರಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಡ್ರಗ್ಸ್ ಪಾರ್ಟಿ: ಜಾಮೀನಿನ ಮೇಲೆ ಹೊರ ಬಂದ ಶಕ್ತಿ ಕಪೂರ್ ಮಗ ಸಿದ್ದಾಂತ್ ಕಪೂರ್