ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ, ಗಾಂಜಾವನ್ನು ಅಧಿಕ ಲಾಭ ಗಳಿಸುವ ಉದ್ದೇಶದಿಂದ ಶೇಖರಣೆ ಮಾಡಿಟ್ಟುಕೊಂಡಿದ್ದ ಅಂತರ್ ಜಿಲ್ಲಾ ಗಾಂಜಾ ಗ್ಯಾಂಗ್ ಮೇಲೆ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದಿಂದ ನಿನ್ನೆ ದಾಳಿ ನಡೆಸಲಾಗಿದೆ. ಈ ವೇಳೆ 6 ಜನ ಕುಖ್ಯಾತ ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಸುಮಾರು 10 ಲಕ್ಷ ರೂ. ಬೆಲೆ ಬಾಳುವ 15 ಕೆ.ಜಿ ಗಾಂಜಾ, ಮೊಬೈಲ್ ಫೋನ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬೆಂಗಳೂರು ನಗರದ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಞಾನಜ್ಯೋತಿ ನಗರದ ಮಲ್ಲತಹಳ್ಳಿ ಮುಖ್ಯರಸ್ತೆಯ ಮನೆಯೊಂದರಲ್ಲಿ ಗಾಂಜಾವನ್ನು ಶೇಖರಿಸಿ ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ, ಸಾಫ್ಟ್ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡುವ ಯೋಜನೆಯಲ್ಲಿದ್ದರು. ಚಾಮರಾಜನಗರ ಜಿಲ್ಲೆಯ 3 ಮಂದಿ ಮತ್ತು ಬೆಂಗಳೂರಿನಲ್ಲಿ ವಾಸವಾಗಿರುವ 3 ಜನ ಸೇರಿ ಒಟ್ಟು 6 ಆರೋಪಿಗಳನ್ನು ಬಂಧಿಸಲಾಗಿದೆ. ಇವರುಗಳ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ : ಎಎಸ್ಐ ಸೇರಿ ಜೂಜಾಟದಲ್ಲಿ ಸಿಕ್ಕಿಬಿದ್ದಿದ್ದ ಮೂವರು ಸರ್ಕಾರಿ ನೌಕರರು ಸಸ್ಪೆಂಡ್
ಸಿಸಿಬಿ ಮಾದಕ ವಸ್ತು ನಿಗ್ರಹ ಪೊಲೀಸ್ ಆಯುಕ್ತರಾದ ಗೌತಮ್ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆರ್ ದೀಪಕ್ ಹಾಗೂ ಸಿಬ್ಬಂದಿಯನ್ನು ಒಳಗೊಂಡ ತಂಡ ದಾಳಿಯಲ್ಲಿ ಪಾಲ್ಗೊಂಡಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.