ಬೆಂಗಳೂರು: ವಿಶ್ವ ಸಮುದಾಯಕ್ಕೆ ತೆರೆದುಕೊಂಡಿರುವ ಬೆಂಗಳೂರಿನಲ್ಲಿ ಎಲ್ಲಾ ಮಾಫಿಯಾಗಳು ತಲೆ ಎತ್ತಿವೆ. ಅಂತೆಯೇ ಡ್ರಗ್ ಮಾಫಿಯಾ ಕೂಡ. ಹಾಗೆಯೇ ಇದು ರಾಜಧಾನಿಗೆ ಸೀಮಿತವಾಗಿಲ್ಲ, ರಾಜ್ಯದ ಮೂಲೆಮೂಲೆಗೆ ವಿಸ್ತರಿಸಿಕೊಂಡಿದೆ. ಹೀಗಾಗಿ, ರಾಜ್ಯದಲ್ಲಿ ಮಾದಕ ದ್ರವ್ಯ ಜಾಲ ನಿಯಂತ್ರಣಕ್ಕೆ ಬಾರದ ರೀತಿ ಬೆಳೆದು ನಿಂತಿದ್ದು, ಅದರ ಮೂಲ ಹುಡುಕುವಲ್ಲಿ ಖಾಕಿ ಪಡೆ ಸುಸ್ತಾಗಿದೆ. ಸಿಕ್ಕಸಿಕ್ಕಲೆಲ್ಲಾ ಡ್ರಗ್ ಬಳಸುವವರನ್ನು ಪೊಲೀಸರು ಮಟ್ಟ ಹಾಕುತ್ತಲೇ ಬಂದಿದ್ದಾರೆ. ಅಷ್ಟಾದರೂ ಅದರ ಮೂಲ ಮಾತ್ರ ನಿಗೂಢವಾಗಿಯೇ ಇದೆ. ದಂಧೆಕೋರರು ಯಾವೆಲ್ಲಾ ಮಾರ್ಗದಲ್ಲಿ ಡ್ರಗ್ಸ್ ಸರಬರಾಜು ಮಾಡ್ತಾರೆ. ಯಾರೆಲ್ಲಾ ಬಳಕೆ ಮಾಡ್ತಿದ್ದಾರೆ? ಇಲ್ಲಿದೆ ಸಂಪೂರ್ಣ ವರದಿ.
ದಶಕದ ಹಿಂದೆ ಹತ್ತಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಡ್ರಗ್ಸ್ ಮಾಫಿಯಾಗಳು ಈಗ ಸಾವಿರಾರು ಕೋಟಿ ಗಳಿಕೆಯ ಮಟ್ಟಕ್ಕೆ ಬೆಳೆದು ನಿಂತಿವೆ. ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರು ಮಾಫಿಯಾಕ್ಕೆ ಕೇಂದ್ರ ಸ್ಥಾನವಾಗಿದೆ. ಇತ್ತ ಮಂಗಳೂರಿನಲ್ಲೂ ಅದಕ್ಕೆ ಕಡಿವಾಣ ಬಿದ್ದಿಲ್ಲ. ನಗರದ ಗಲ್ಲಿಗಳಲ್ಲಿ ಒಂದಲ್ಲ ಒಂದು ಕಡೆ ಡ್ರಗ್ಸ್ ಮಾರಾಟವಾಗುತ್ತಿರುತ್ತವೆ. ಆನ್ಲೈನ್ನಲ್ಲಿ ಆರ್ಡರ್ ಮಾಡಿದ ವಸ್ತುಗಳು ಸಮಯಕ್ಕೆ ಬರುತ್ತವೋ ಇಲ್ಲವೋ ಗೊತ್ತಿಲ್ಲ. ಆದರೆ, ಡ್ರಗ್ಸ್ ಮಾತ್ರ ಸರಿಯಾದ ಸಮಯಕ್ಕೆ ಮನೆ ತಲುಪುತ್ತದೆ. ಅಷ್ಟರ ಮಟ್ಟಿಗೆ ಬೆಳವಣಿಗೆ ಜಾಲ ಹರಡಿಕೊಂಡಿದೆ ಎಂಬುದನ್ನು ಈ ಮೂಲಕ ತಿಳಿಯಬಹುದು. ಇನ್ನು ಡ್ರಗ್ಸ್ ಪೆಡ್ಲರ್ಗಳನ್ನು ಮಟ್ಟ ಹಾಕಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಪಣ ತೊಟ್ಟಿದ್ದಾರೆ.
ಡ್ರಗ್ಸ್ ಎಲ್ಲೆಲ್ಲಿ ಮಾರಾಟವಾಗುತ್ತೆ?: ಬೆಂಗಳೂರಿನಲ್ಲಿ ಡ್ರಗ್ ಜಾಲ ಬಹಳಷ್ಟು ಪವರ್ ಫುಲ್ ಆಗಿದೆ. ಕೆಲವು ಬೇಕರಿ, ಪಾನ್ ಶಾಪ್, ಎಳನೀರು ಅಂಗಡಿ, ಪಿಜಿಗಳಲ್ಲಿ, ದಿನಸಿ ಅಂಗಡಿ, ಮನೆಗಳಲ್ಲಿ ಮಾರಾಟ ಮಾಡಲಾಗ್ತಿದೆ. ಅಷ್ಟೇ ಅಲ್ಲ, ಕಾಲೇಜು ವಿದ್ಯಾರ್ಥಿಗಳು, ಕಾಲೇಜು, ಕ್ಯಾಂಟೀನ್, ಹಾಸ್ಟೆಲ್, ದೊಡ್ಡ ದೊಡ್ಡ ಹೊಟೇಲ್, ಬಾರ್-ರೆಸ್ಟೋರೆಂಟ್ ಹಾಗೆ ಹುಕ್ಕಾ ಸೆಂಟರ್ಗಳಲ್ಲೂ ಮಾರಾಟ ಮಾಡಲಾಗ್ತಿದೆ. ಇನ್ನು ಪೊಲೀಸರಿಗೆ ಸುಳಿವು ಸಿಗಬಾರದೆಂಬ ಕಾರಣಕ್ಕೆ ಡಾರ್ಕ್ವೆಬ್ನಲ್ಲಿ ಬಿಟ್ಕಾಯಿನ್ ಮೂಲಕ ಮಾದಕ ವಸ್ತು ಖರೀದಿಸುತ್ತಾರೆ ಎಂಬ ಮಾಹಿತಿಯೂ ಹೊರಬೀಳುತ್ತದೆ.
ಈ ಡ್ರಗ್ಸ್ ಗ್ಯಾಂಗ್ ತಮ್ಮದೇ ಆದ ವ್ಯವಸ್ಥಿತ ಜಾಲವನ್ನು ಸೃಷ್ಟಿಸಿಕೊಂಡಿದೆ. ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕರು, ಟೆಕ್ಕಿಗಳು, ವಿದ್ಯಾಭ್ಯಾಸಕ್ಕೆ ಹೊರಗಿನಿಂದ ಬಂದವರು, ಸಿನಿಮಾ ಮತ್ತು ಕಿರುತೆರೆ ಕಲಾವಿದರು, ಕೆಲಸ ಅರಸಿ ಬರುವ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಮಾರಾಟ ಮಾಡ್ತಾರೆ. ಗುರುವಾಷ್ಟೇ ಬೃಹತ್ ಡ್ರಗ್ಸ್ ಜಾಲವೊಂದು ಪೊಲೀಸರ ಬಲೆಗೆ ಬಿದ್ದಿದ್ದು, ಸಿನಿಮಾ, ಸಂಗೀತ ನಿರ್ದೇಶಕರು ಕೂಡ ಡ್ರಗ್ ತರಿಸಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಕರ್ನಾಟಕದಲ್ಲಿ ಬೇರುಬಿಟ್ಟ ಡ್ರಗ್ಸ್ ಮಾಫಿಯಾ ಜಾಲ... ಮೂಲ ಪತ್ತೆಗೆ ಪೊಲೀಸರ ಪಣ ಎಲ್ಲಿಂದ ಬರುತ್ತೆ ಈ ಮಾದಕ ದ್ರವ್ಯ?:ಹೆರಾಯಿನ್ ಹಾಗೂ ಅಫೀಮನ್ನು ಅಫ್ಗಾನಿಸ್ತಾನ, ಪಾಕಿಸ್ತಾನ ಹಾಗೂ ಇರಾನ್ ದೇಶಗಳು ವಿಶ್ವಕ್ಕೆ ಶೇ,80ರಷ್ಟು ಪೂರೈಕೆ ಮಾಡುತ್ತಿವೆ. ನೈಜಿರಿಯಾ, ಆಫ್ರಿಕಾ ದೇಶಗಳು, ಜರ್ಮನಿ, ಬೆಲ್ಜಿಯಂ ಮತ್ತು ಡೆನ್ಮಾರ್ಕ್ನಿಂದ ನಿರಂತರವಾಗಿ ಡ್ರಗ್ಸ್ ತರಿಸಿಕೊಳ್ಳಲಾಗಿದೆ. ಕೊರಿಯರ್ ಮತ್ತು ಅಂಚೆ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ನಿಷೇಧ ಹೇರಿದ್ದಾಗ, ಡ್ರಗ್ಸ್ಗೆ ಬೇಡಿಕೆ ಹೆಚ್ಚಾಗಿತ್ತು ಎನ್ನಲಾಗ್ತಿದೆ. ಈ ರಾಷ್ಟ್ರಗಳಿಂದ ಹಡಗಿನಲ್ಲಿ ಬರುವ ಮಾದಕ ವಸ್ತುಗಳು ಗೋವಾ, ಕೇರಳ ,ತಮಿಳುನಾಡು, ವಿಶಾಖಪಟ್ಟಣ, ಮುಂಬೈ, ಗೋವಾ ಹಾಗೂ ಬೆಂಗಳೂರು ತಲುಪುತ್ತಿವೆ.
ಇನ್ನು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಕಣ್ತಪ್ಪಿಸಿ ಡ್ರಗ್ಸ್ ತರುತ್ತಿರುವ ಆರೋಪಿಗಳು ಡ್ರಗ್ಸ್ ಪುಡಿಯನ್ನು ಅಕ್ಕಿ–ಗೋಧಿ ಹಿಟ್ಟಿನೊಂದಿಗೆ ಮಿಶ್ರಣ ಮಾಡಿಕೊಂಡು ತರುತ್ತಾರೆ. ಪಾದ ಕುಯ್ದುಕೊಂಡು ಅಲ್ಲಿ ಡ್ರಗ್ಸ್ ಇಟ್ಟುಕೊಂಡು ಬರುತ್ತಾರೆ. ಮತ್ತು ಬರುವ ಮಾತ್ರೆಗಳನ್ನು ಕವರ್ ಸಮೇತ ನುಂಗಿಕೊಂಡು ಬರುತ್ತಾರೆ. ಚಾಕೊಲೇಟ್ ಮಾದರಿಯಲ್ಲಿ ಡ್ರಗ್ಸ್ ಪ್ಯಾಕ್ ಮಾಡಿ ಸಾಗಣೆ ಮಾಡುತ್ತಾರೆ. ಅದಷ್ಟೇ ಅಲ್ಲ, ಏಜೆಂಟ್‌ಗಳು ರೈಲು, ಬಸ್, ಸರಕು ಸಾಗಣೆ ವಾಹನ ಮೂಲಕ ಸುಲಭವಾಗಿ ಕರ್ನಾಟಕಕ್ಕೆ ತರುತ್ತಿದ್ದಾರೆ. ಕೊರಿಯರ್ ಮತ್ತು ಅಂಚೆ, ಆಟಿಕೆಗಳಲ್ಲಿ, ಅಂಚೆಚೀಟಿ ಮಾದರಿ, ಕಲಾತ್ಮಕ ಚಿತ್ರಗಳಿರುವ ಕಾಗದದಲ್ಲಿ ಮಾದಕ ವಸ್ತುಗಳನ್ನು ಪೂರೈಸುತ್ತಿರುವುದು ಈಗಾಗಲೇ ಬೆಳಕಿಗೆ ಬಂದಿದೆ.
ಬಂಧನವಾದ ವಿದೇಶಿಗರೆಷ್ಟು: ಇನ್ನು ನಗರಕ್ಕೆ ತಂದು ಒಂದು ಗ್ರಾಂಗೆ 8 ಸಾವಿರದಿಂದ 12 ಸಾವಿರದವರೆಗೆ ಇದು ಮಾರಾಟವಾಗುತ್ತದೆ. ಮತ್ತೊಂದೆಡೆ ವಿದೇಶಿ ಪ್ರಜೆಗಳು ವೀಸಾ ಅವಧಿ ಮುಗಿದಿದ್ದರೂ ಕೂಡ ತಮ್ಮ ದೇಶಕ್ಕೆ ಹೋಗದೆ ನಗರದಲ್ಲಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹೆಣ್ಣೂರು, ರಾಮಮೂರ್ತಿನಗರ, ಬಾಣಸವಾಡಿ, ಕೋರಮಂಗಲ ಹೀಗೆ ನಗರದ ಬಹುತೇಕ ಕಡೆ ನಕಲಿ ದಾಖಲೆ ಸಲ್ಲಿಸಿ ಬಾಡಿಗೆ ಮನೆ ಪಡೆದಿದ್ದಾರೆ. ನಂತ್ರ ತಮ್ಮದೇ ಗ್ಯಾಂಗ್ ಅನ್ನು ಸೃಷ್ಟಿಸಿ ಗಾಂಜಾ ಮಾರಾಟ ಮಾಡ್ತಾರೆ. ಸದ್ಯ ಒಟ್ಟು799 ವಿದೇಶಿಗರನ್ನ ಬಂಧಿಸಲಾಗಿದೆ.
ಇನ್ನು 2020 ಜನವರಿಯಿಂದ ಇಲ್ಲಿಯವರೆಗೆ ದಾಖಲಾದ ಕೇಸ್ಗಳನ್ನ ನೋಡುವುದಾದರೆ ಕೇಂದ್ರ ವಿಭಾಗದಲ್ಲಿ 15, ಪಶ್ಚಿಮ ವಿಭಾಗದಲ್ಲಿ 235, ಉತ್ತರ ವಿಭಾಗದಲ್ಲಿ 105, ದಕ್ಷಿಣಾ ವಿಭಾಗದಲ್ಲಿ 90, ಆಗ್ನೇಯ ವಿಭಾಗದಲ್ಲಿ 59, ವೈಟ್ ಫೀಲ್ಡ್ ವಿಭಾಗದಲ್ಲಿ 71,ಈಶಾನ್ಯ ವಿಭಾಗದಲ್ಲಿ 160 ದಾಖಲಾದ ಪ್ರಕರಣಗಳು ಆಗಿದೆ. ಇಲ್ಲಿಯವರೆಗೆ ಈ ವರ್ಷ ಬಂಧನಕ್ಕೆ ಒಳಗಾದ 200ಕ್ಕೂ ಹೆಚ್ಚು ಆರೋಪಿಗಳನ್ನ ವಿಚಾರಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ 438 ಪ್ರಕರಣಗಳು ಪತ್ತೆಯಾಗಿದ್ದವು.
ಪೊಲೀಸ್ ಇಲಾಖೆ ಮುಂದೆ ಮಾಡಬೇಕಾಗಿದ್ದು ಏನು?: ಸದ್ಯ ಬೆಂಗಳೂರು ಅಲ್ಲದೇ ಇಡೀ ಕರ್ನಾಟಕದಲ್ಲಿ ಡ್ರಗ್ ನಿರ್ಮೂಲನೆ ಮಾಡಲು ಪೊಲೀಸರ ತಂಡಗಳು ಸಿದ್ಧಗೊಂಡಿವೆ. ಆದರೆ, ಆರೋಪಿಗಳನ್ನು ಮಾತ್ರ ಮಟ್ಟ ಹಾಕಿದರೆ ಸಾಲದು, ಅದರ ಮೂಲವನ್ನು ಪತ್ತೆ ಹಚ್ಚಿ ಜಾಲವನ್ನು ಸಂಪೂರ್ಣ ಮಟ್ಟ ಹಾಕಬೇಕು. ಅಲ್ಲದೆ, ಮಾದಕ ವಸ್ತು ವಿರೋಧಿ ಅಭಿಯಾನ ನಡೆಸಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕಿದೆ.