ಬೆಂಗಳೂರು: ನಗರದ ಜಾಲಹಳ್ಳಿ ಸಮೀಪದ ಏರ್‌ಫೋರ್ಸ್ ಗೇಟ್ ಬಳಿ ದಾನಿಗಳ ನೆರವಿನಿಂದ ನವೀಕರಣಗೊಂಡ ಹುತಾತ್ಮ ಯೋಧರ ಸ್ಮಾರಕವನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಲೋಕಾರ್ಪಣೆ ಮಾಡಿದರು.
2019 ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಎಂ, ಮೊಂಬತ್ತಿಗಳನ್ನು ಬೆಳಗುವ ಮೂಲಕ ಯೋಧರಿಗೆ ಗೌರವ ಸಲ್ಲಿಸಿದರು.
ಇದೇ ವೇಳೆ, ಮೇಜರ್ ಉನ್ನಿಕೃಷ್ಣನ್ ಅವರ ಪೋಷಕರು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ದೇಶಕ್ಕಾಗಿ ವೀರ ಮರಣವನ್ನಪ್ಪಿದ ಯೋಧರ ಪೋಷಕರನ್ನು ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಡಿಸಿಎಂ, ಗಡಿಯಲ್ಲಿ ನಮ್ಮನ್ನು ರಕ್ಷಣೆ ಮಾಡುತ್ತಾ ಯೋಧರು ಅದೆಷ್ಟು ಬದ್ಧತೆಯಿಂದ ಕಾರ್ಯನಿರ್ವಹಣೆ ಮಾಡುತ್ತಾರೋ, ಅದೇ ರೀತಿ ಗಡಿ ಒಳಗೆ ಎಲ್ಲ ಕ್ಷೇತ್ರಗಳಲ್ಲಿರುವ ವ್ಯಕ್ತಿಗಳು ಕೂಡ ಅದೇ ಬದ್ಧತೆಯಿಂದ ಕೆಲಸ ಮಾಡಬೇಕು. ಸೈನಿಕರ ದೇಶ ಪ್ರೇಮ ನಮಗೆಲ್ಲರಿಗೂ ಸ್ಫೂರ್ತಿ ಎಂದರು.