ಬೆಂಗಳೂರು: ಇನ್ನೇನು ಕೋವಿಡ್ ಪ್ರಕರಣಗಳು ಇಳಿಮುಖವಾಯ್ತು ಎನ್ನುವಷ್ಟರಲ್ಲಿ ಹೊಸ ತಳಿ ಒಮಿಕ್ರಾನ್ ಮತ್ತೆ ಆತಂಕದ ವಾತಾವರಣ ಸೃಷ್ಟಿಸಿದೆ. ಒಮಿಕ್ರಾನ್ ಹರಡುವಿಕೆ ಪ್ರಮಾಣ ಹಳೇ ವೈರಸ್ಗಿಂತಲೂ ಮೂರು ಪಟ್ಟು ಅಧಿಕವಾಗಿ ಇರಲಿದೆ ಅಂತಾ ತಜ್ಞರು ಎಚ್ಚರಿಸಿದ್ದಾರೆ.
ಮೊದಲ ಅಲೆಯಲ್ಲಿ ಕೋವಿಡ್ ತಳಿ D614G ದೇಹಕ್ಕೆ ಹೊಕ್ಕಲು ಎರಡು ವಾರಗಳು ತೆಗೆದುಕೊಳ್ಳುತ್ತಿತ್ತು. ಎರಡನೇ ಅಲೆಯಲ್ಲಿ ಡೆಲ್ಟಾ ತಳಿ ದೇಹಕ್ಕೆ ಹೊಕ್ಕಲು 7 ದಿನಗಳು ತೆಗೆದುಕೊಳ್ಳುತ್ತಿತ್ತು. ಆದರೆ, ಈ ಒಮಿಕ್ರಾನ್ ಕೇವಲ 3 ದಿನಗಳೊಳಗೆ ದೇಹಕ್ಕೆ ತಲುಪುವ ಭೀತಿಯನ್ನು ರಾಜ್ಯ ಜಿನೋಮಿಕ್ ಸೀಕ್ವೆನ್ಸ್ ಸಮಿತಿಯ ತಜ್ಞ ವೈದ್ಯರಾಗಿರುವ ಡಾ. ವಿಶಾಲ್ ರಾವ್ ವ್ಯಕ್ತಪಡಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲೇ ಡೆಲ್ಟಾ ತಳಿ ಕಾಲಿಟ್ಟು, ಮಾರ್ಚ್ ತಿಂಗಳಲ್ಲಿ ಎರಡನೇ ಅಲೆ ಅಪ್ಪಳಿಸಿತ್ತು. ಮಾರ್ಚ್ ಮೊದಲ ವಾರದಲ್ಲಿ ಇದ್ದ ಶೇ.0.5 ಪಾಸಿಟಿವಿಟಿ ರೇಟ್, ಮಾರ್ಚ್ ಕೊನೆಯಲ್ಲಿ ಶೇ.5ಕ್ಕೆ ಏರಿತ್ತು. ಏಪ್ರಿಲ್ ಕೊನೆಯಲ್ಲಿ ಪಾಸಿಟಿವಿಟಿ ರೇಟ್ ಶೇ.25 ಅನ್ನು ದಾಟ್ಟಿತ್ತು. ಇದೀಗ ದೇಶಕ್ಕೆ ಕಾಲಿಟ್ಟಿರುವ ಒಮಿಕ್ರಾನ್ ಅದರ ಅರ್ಧ ಸಮಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.
ಒಮಿಕ್ರಾನ್ ಸ್ಫೋಟ:
ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿರುವ ಡಾ. ವಿಶಾಲ್ ರಾವ್, ಒಮಿಕ್ರಾನ್ ಹೆಚ್ಚಳದ ಕುರಿತು ವಿವರಿಸಿದ್ದಾರೆ. ಡೆನ್ ಮಾರ್ಕ್ನಲ್ಲಿ ಸ್ಫೋಟಿಸಿರುವ ಒಮಿಕ್ರಾನ್ 4 ಇದ್ದ ಸೋಂಕಿತರ ಸಂಖ್ಯೆ ಒಂದೇ ವಾರದಲ್ಲಿ 400ಕ್ಕೆ ಜಿಗಿದಿದೆ.