ಕರ್ನಾಟಕ

karnataka

ETV Bharat / city

ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡದಿದ್ದರೆ ಕಠಿಣ ಕ್ರಮ: ಖಾಸಗಿ ಆಸ್ಪತ್ರೆಗಳಿಗೆ ಸಚಿವ ಸುಧಾಕರ್ ಖಡಕ್ ಎಚ್ಚರಿಕೆ - ಖಾಸಗಿ ಆಸ್ಪತ್ರೆಗಳಿಗೆ ಸಚಿವರ ಎಚ್ಚರಿಕೆ

ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಮತ್ತು ನಾನು ಪದೇ ಪದೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ಬಹಳಷ್ಟು ಖಾಸಗಿ ಆಸ್ಪತ್ರೆಗಳು ಶೇ. 15ರಿಂದ 20ರಷ್ಟು ಮಾತ್ರ ಹಾಸಿಗೆ ಬಿಟ್ಟುಕೊಟ್ಟಿವೆ. ಕೂಡಲೇ ನಿಗದಿಪಡಿಸಿದ ಬೆಡ್​ಗಳನ್ನು ನೀಡಲೇಬೇಕು. ಇಲ್ಲದಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

Dr Sudhakar warns private hospitals
ಆರೋಗ್ಯ ಸಚಿವ ಡಾ.ಕೆ ಸುಧಾಕರ್

By

Published : Apr 15, 2021, 7:58 PM IST

ಬೆಂಗಳೂರು: ಕೋವಿಡ್ ಚಿಕಿತ್ಸೆಗೆ ಹಾಸಿಗೆ ಮೀಸಲಿಡದ ಖಾಸಗಿ ಆಸ್ಪತ್ರೆಗಳ ಮೇಲೆ ಗಂಭೀರ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೋವಿಡ್ ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗಳು ಸ್ಪಂದಿಸುತ್ತಿಲ್ಲ. ಕೋವಿಡ್ ರೋಗಿಗಳಿಗೆ ಬೆಡ್ ನೀಡುತ್ತಿಲ್ಲ. ಕಳೆದ 15 ದಿನಗಳಲ್ಲಿ ಕೇವಲ ಶೇ. 15-20ರಷ್ಟು ಮಾತ್ರ ಬೆಡ್ ನೀಡುತ್ತಿದ್ದಾರೆ. ಕಳೆದ ವರ್ಷದಂತೆ ಖಾಸಗಿ ಆಸ್ಪತ್ರೆ‌ಗಳ ಮೇಲೆ‌ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ. ಕ್ರಮ‌ ತೆಗೆದುಕೊಳ್ಳುವವರೆಗೆ ದಯವಿಟ್ಟು ಕಾಯಬೇಡಿ. ಕೋವಿಡ್ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡಿ‌. ಸರ್ಕಾರ ಸುಮ್ಮನೆ ಇರುವುದಿಲ್ಲ. ಈ ಬಗ್ಗೆ ನಾನು ಸೂಚನೆ, ಸಲಹೆ, ಮನವಿಯನ್ನೂ ಮಾಡುತ್ತಿದ್ದೇನೆ. ಖಾಸಗಿ ಆಸ್ಪತ್ರೆಗಳು ಸರ್ಕಾರದ ಜೊತೆ ಸ್ಪಂದಿಸಬೇಕು ಎಂದರು.

ಆರೋಗ್ಯ ಸಚಿವ ಡಾ. ಕೆ.ಸುಧಾಕರ್

ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಮತ್ತು ನಾನು ಪದೇ ಪದೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೂ ಬಹಳಷ್ಟು ಖಾಸಗಿ ಆಸ್ಪತ್ರೆಗಳು ಶೇ. 15ರಿಂದ 20ರಷ್ಟು ಮಾತ್ರ ಹಾಸಿಗೆ ಬಿಟ್ಟುಕೊಟ್ಟಿವೆ. ಕೂಡಲೇ ನಿಗದಿಪಡಿಸಿದ ಬೆಡ್​ಗಳನ್ನು ನೀಡಲೇಬೇಕು. ಇಲ್ಲದಿದ್ರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಕೋವಿಡೇತರ ರೋಗಿಗಳನ್ನು ಶೀಘ್ರವೇ ಡಿಸ್ಚಾರ್ಜ್ ಮಾಡಿ. ಆ ಹಾಸಿಗೆಗಳನ್ನು ಗಂಭೀರವಾಗಿ ಕೋವಿಡ್ ಎದುರಿಸುತ್ತಿರುವವರಿಗೆ ನೀಡಿ ಎಂದು ಮನವಿ ಮಾಡಿದರು.

ಖಾಸಗಿ ಹೋಟೆಲ್‌ಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡುತ್ತೇವೆ. ಕಾರ್ಪೋರೇಟ್ ಆಸ್ಪತ್ರೆಗಳೇ ಕೋವಿಡ್ ಕೇರ್ ಸೆಂಟರ್​ನ ಜವಾಬ್ದಾರಿ ವಹಿಸಿಕೊಳ್ಳುತ್ತವೆ. ಗಂಭೀರ ಸ್ವರೂಪದ ರೋಗಿಗಳನ್ನು ಆಸ್ಪತ್ರೆಯಲ್ಲಿ ದಾಖಲು‌ ಮಾಡುತ್ತೇವೆ ಎಂದು ತಿಳಿಸಿದರು.

ಆ್ಯಂಬುಲೆನ್ಸ್ ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ:

ಖಾಸಗಿ ಆ್ಯಂಬುಲೆನ್ಸ್​ನವರು ದುಡ್ಡು ವಸೂಲಿ ಮಾಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಎಚ್ಚರಿಕೆ ನೀಡಿದರು. ಹೆಣದ‌ ಮೇಲೆ ಶೋಷಣೆ ಸರಿಯಲ್ಲ. ಖಂಡಿತವಾಗಿ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲಾಗುತ್ತದೆ. ದುಡ್ಡು ವಸೂಲಿ ಮಾಡಿದ ಬಗ್ಗೆ ಗಮನಕ್ಕೆ ಬಂದರೆ ಪೊಲೀಸರಿಗೆ ದೂರು ನೀಡಬೇಕು. ಇಂತಹ ಕೆಟ್ಟ ಸಂದರ್ಭದಲ್ಲಿ ಅಮಾನವೀಯ ನಡವಳಿಕೆ ಸರಿಯಲ್ಲ ಎಂದರು.

ನಿನ್ನೆ ಮೇಡಿ ಅಗ್ರಹಾರದ ಚಿತಾಗಾರದಲ್ಲಿ ಆ್ಯಂಬುಲೆನ್ಸ್​ಗಳು ಕ್ಯೂ ನಿಂತ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಿನ್ನೆ 14ರಿಂದ 15 ಸಾವಾಗಿದೆ. ಅಷ್ಟನ್ನೂ ಕೋವಿಡ್ ಸಾವು ಎಂದು ಒಂದೇ ಚಿತಾಗಾರಕ್ಕೆ ಕಳಿಸಲಾಗಿದೆ. ಹಾಗಾಗಿ ಅಲ್ಲಿ ಕ್ಯೂ ಆಗಿತ್ತು. ಹೆಣಗಳನ್ನು ಬೇರೆ ಬೇರೆ ಚಿತಾಗಾರಗಳಿಗೆ ಹಂಚಿಕೆ ಮಾಡಬೇಕಿತ್ತು. ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇನೆ. ಆ ರೀತಿ ಮಾಡದಂತೆ ನೋಡಿಕೊಳ್ಳಿ ಎಂದು ಹೇಳಿದ್ದೇನೆ. ಚಿತಾಗಾರದಲ್ಲಿ ಯಾವುದೇ ನ್ಯೂನತೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಹಾಸಿಗೆ ಹೆಚ್ಚಳ:ರಾಜೀವ್ ಗಾಂಧಿ ಆಸ್ಪತ್ರೆಯನ್ನು ಸಂಪೂರ್ಣ ಐಎಲ್ಐ ಮತ್ತು ಸಾರಿ ಕೇಸ್​ಗಳಿಗೆ ಮೀಸಲಿರಿಸಲಾಗಿದೆ. ಬೆಂಗಳೂರಿನಲ್ಲಿ ಎಲ್ಲೇ ಐಎಲ್ಐ, ಸಾರಿ ಕೇಸ್ ಇದ್ರೂ ಇದೇ ಆಸ್ಪತ್ರೆಗೆ ಹೋಗಬೇಕು ಎಂದು ತಿಳಿಸಿದರು.

ಇನ್ನೆರಡು ದಿನಗಳಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ವಿಕ್ಟೋರಿಯಾದಲ್ಲಿ 500 ಹಾಸಿಗೆಗಳನ್ನು ಕೋವಿಡ್​ಗೆ ಹೆಚ್ಚುವರಿಯಾಗಿ ಮೀಸಲಿರಿಸಲಾಗುವುದು. ಬೌರಿಂಗ್ ಆಸ್ಪತ್ರೆಯಲ್ಲಿ 300, ಹೊಸ ಆಸ್ಪತ್ರೆ ಚರಕ‌ದಲ್ಲಿ‌ 150, ಘೋಶಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನು ಕೋವಿಡ್​ಗೆ ಮೀಸಲಿಡುತ್ತೇವೆ. ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 100 ಐಸಿಯು ಹಾಸಿಗೆಗಳು, ಸಿ.ವಿ.ರಾಮನ್ ಆಸ್ಪತ್ರೆ, ಜಯನಗರ ಆಸ್ಪತ್ರೆಗಳಲ್ಲೂ ಕೋವಿಡ್​ಗೆ ಹಾಸಿಗೆಗಳನ್ನು ಹೆಚ್ಚಿಸುತ್ತಿದ್ದೇವೆ‌ ಎಂದರು.

ಕಠಿಣ ಕ್ರಮಗಳ ಬಗ್ಗೆ ವರದಿ ಸಲ್ಲಿಸಲಿದ್ದಾರೆ:ತಾಂತ್ರಿಕ ಸಲಹಾ ಸಮಿತಿ ಕಠಿಣ ಕ್ರಮ ಕೈಗೊಳ್ಳುವ ಸಂಬಂಧ ವರದಿ ಸಲ್ಲಿಸಲಿದೆ. ಸಿಎಂ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸಭೆಗೆ ಸಿಎಂ ಕೂಡ ಬರುತ್ತಾರೆ. ಸಿಎಂಗೆ ವರದಿ ನೀಡಲಿದ್ದಾರೆ. ವರದಿಯಲ್ಲಿ ಉಲ್ಲೇಖಿಸಲಾದ ಎಲ್ಲಾ ಅಂಶಗಳ ಬಗ್ಗೆ ಚರ್ಚಿಸಲಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಸಲಹೆ ನೀಡಲಿದ್ದಾರೆ. ವೈಜ್ಞಾನಿಕವಾಗಿ ಸಲಹೆಗಳನ್ನು ನೀಡಲಿದ್ದಾರೆ. ಸಿಎಂ ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕೆಎಂಸಿ ನೋಂದಣಿ ತೊಡಕಿನ ಬಗ್ಗೆ ಚರ್ಚೆ:ವೈದ್ಯ ವಿದ್ಯಾರ್ಥಿಗಳ ಗ್ರಾಮೀಣ ಸೇವೆ ವಿಚಾರವಾಗಿ ವೈದ್ಯರಿಗೆ ಕೆಎಂಸಿ ನೋಂದಣಿ ಬಗ್ಗೆ ತೊಡಕಿತ್ತು. ಕೆಎಂಸಿ ನೋಂದಣಿ ಆಗದಿದ್ದರೆ ವೈದ್ಯರಿಗೆ ಕೆಲಸ ಮಾಡಲು ತೊಂದರೆಯಾಗುತ್ತದೆ. ಸರ್ಕಾರ ಅಂತಹ ವೈದ್ಯರ ಪರ ಒಂದು ನಿರ್ಧಾರ ತೆಗೆದುಕೊಂಡಿದೆ ಎಂದು ಮಾಹಿತಿ ನೀಡಿದರು.

2006, 2012, 2015‌ರ ಕಾನೂನುಗಳ ಪ್ರಕಾರ ಒಂದು ವರ್ಷ ಗ್ರಾಮೀಣ ಸೇವೆ ಕಡ್ಡಾಯವಾಗಿದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಓದಿದವರು ಇದರ ವಿರುದ್ಧ ಕೋರ್ಟ್​ಗೆ ಹೋಗಿದ್ದಾರೆ. ಆದರೂ ನಾವು ವಿದ್ಯಾರ್ಥಿಗಳ ಪರವಾಗಿ ಅವರಿಂದ ಬಾಂಡ್ ತೆಗೆದುಕೊಂಡು ಕೆಎಂಸಿ‌ ನೋಂದಣಿ ಮಾಡಿಸಿಕೊಳ್ಳುತ್ತಿದ್ದೇವೆ. ಈ ಮೂಲಕ ಅವರಿಗೆ ಅನ್ಯಾಯ ಆಗದಂತೆ ಕ್ರಮ ಕೈಗೊಂಡಿದ್ದೇವೆ ಎಂದರು.

ABOUT THE AUTHOR

...view details