ಕರ್ನಾಟಕ

karnataka

ETV Bharat / city

ಆಳೋರ ಉದಾಸೀನತೆ.. ಡಾ ಸರೋಜಿನಿ ಮಹಿಷಿ ವರದಿಗೆ 26 ವರ್ಷ.. ಅನ್ನದ ಭಾಷೆಯಾಗದ ಕನ್ನಡ! - ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬಂದ್

ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಫೆಬ್ರವರಿ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.

Dr Sarojini Mahishi reports 26 years
ಡಾ ಸರೋಜಿನಿ ಮಹಿಷಿ

By

Published : Feb 12, 2020, 6:45 PM IST

ಬೆಂಗಳೂರು:ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಫೆಬ್ರವರಿ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅಷ್ಟಕ್ಕೂ ಮಹಿಷಿ ವರದಿ ವಿಶೇಷತೆ, ಅದು ಏನನ್ನ ಶಿಫಾರಸು ಮಾಡಿತ್ತು ಅನ್ನೋದರ ಕುರಿತ ಕಂಪ್ಲೀಟ್‌ ವರದಿ ಇಲ್ಲಿದೆ.

ಯಾರಿವರು ಡಾ. ಸರೋಜಿನಿ ಮಹಿಷಿ?

ಡಾ. ಸರೋಜಿನಿ ಮಹಿಷಿ ಹೆಸರು ಪದೇಪದೆ ಚರ್ಚೆಗೆ ಬರುತ್ತಿರುತ್ತದೆ. ಅದಕ್ಕೆ ಕಾರಣವೂ ಇದೆ. ಲೇಖಕಿ, ರಾಜಕಾರಣಿ, ಕಾನೂನುತಜ್ಞೆ, ಕರ್ನಾಟಕದ ಮೊದಲ ಸಂಸದೆ ಹಾಗೂ ಕೇಂದ್ರದ ಮಾಜಿ ಸಚಿವೆ ಡಾ. ಸರೋಜಿನಿ ಕನ್ನಡ, ಹಿಂದಿ, ಮರಾಠಿ ಭಾಷೆಗಳಲ್ಲಿ ಸಾಹಿತ್ಯ ರಚನೆ ಮತ್ತು ಅನುವಾದ ಮಾಡಿದ್ದವರು. ಧಾರವಾಡ ಉತ್ತರಕ್ಷೇತ್ರದಿಂದ 1962-83ರವರೆಗೂ 4 ಬಾರಿ ಸಂಸದೆಯಾಗಿದ್ದರು.1983ರಿಂದ ಜನತಾ ಪಾರ್ಟಿಯಿಂದ 2 ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು.

ಗದಗ್‌ ಜಿಲ್ಲೆ ಶಿರಹಟ್ಟಿ ತಾಲೂಕಿನ ಸರೋಜಿನಿ ಅವರು 1927ರ ಮಾರ್ಚ್ 3ರಂದು ಬಿಂದುರಾವ್‌ ಮಹಿಷಿ ಹಾಗೂ ಕಮಲಾಬಾಯಿ ದಂಪತಿಗೆ ಜನಿಸಿದ್ದರು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ಧಾರವಾಡದಲ್ಲಿ ಪೂರ್ಣಗೊಳಿಸಿದ್ದರು. ಸಾಂಗ್ಲಿಯ ಮಿಲಿಂಗಟನ್ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತ ವಿಷಯದಲ್ಲಿ ಬಿಎ. ಮುಂಬೈನಲ್ಲಿ ಎಂಎ, ಹೋಮಿಯೋಪತಿ, ನಿಸರ್ಗ ಚಿಕಿತ್ಸೆ ಅಧ್ಯಯನ ಹಾಗೂ ಬೆಳಗಾವಿಯ ಆರ್‌ಎಲ್ಎಸ್ ಕಾಲೇಜಿನಲ್ಲಿ ಎಲ್‌ ಎಲ್‌ ಟಿ ಅಧ್ಯಯನ ಮಾಡಿ 1955ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಮೊದಲ ರ್ಯಾಂಕ್‌ನಲ್ಲಿ ಕಾನೂನು ಪದವಿ ಪಡೆದವರು. ಧಾರವಾಡದ ಜನತಾ ಲಾ ಕಾಲೇಜಿನಲ್ಲಿ ಕಾನೂನು ಪ್ರಾಧ್ಯಾಪಕಿಯಾಗಿ 6 ವರ್ಷ ಸೇವೆ ಸಲ್ಲಿಸಿದ್ದರು. ಕನ್ವೀಕರ ವಕೀಲರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ ಬಾರ್ ಕೌನ್ಸಿಲ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಪರಭಾಷಿಕರಿಂದ ರಾಜ್ಯಕ್ಕೆ ಅನ್ಯಾಯವೆಂಬ ಕೂಗು:1983ರಲ್ಲಿ ರಾಮಕೃಷ್ಣ ಹೆಗಡೆ ಸಿಎಂ ಆಗಿದ್ದ ವೇಳೆ ಕನ್ನಡಿಗರಿಗೆ ಪರಭಾಷಿಕರಿಂದ ರಾಜ್ಯದಲ್ಲಿ ಅನ್ಯಾಯ ಎಂಬ ಕೂಗೆದ್ದಿತ್ತು. ಆಗ ಡಾ. ಸರೋಜಿನಿ ಮಹಿಷಿ ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿ ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚನಲ ಮೂಡಿಸಿದ್ದರು. ರೇಲ್ವೆ ಸೇರಿ ಸಾರ್ವಜನಿಕ ಕ್ಷೇತ್ರಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಅವರು ಸಲ್ಲಿಸಿದ ವರದಿ ಸರೋಜಿನಿ ಮಹಿಷಿ ವರದಿ ಎಂದೇ ಪ್ರಸಿದ್ಧ.

26 ವರ್ಷ ಕಳೆದರೂ ವರದಿ ಇನ್ನೂ ಜಾರಿಯಾಗಿಲ್ಲ:ಕನ್ನಡ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೆಲಸದಲ್ಲಿ ಶೇ.5ರಷ್ಟು ಮೀಸಲಿದೆ. ರಾಜದಲ್ಲಿನ ಬಹುರಾಷ್ಟ್ರೀಯ ಕಂಪನಿಗಳಲ್ಲೂ ಕನ್ನಡಿಗರಿಗೆ ಕೆಲಸ ಲಭಿಸಿದರೆ ಕನ್ನಡ ಅನ್ನದ ಭಾಷೆಯಾಗುತ್ತೆ. ಈ ನಿಟ್ಟಿನಲ್ಲಿ ಮಹಿಷಿ ವರದಿ ಪ್ರಾಮುಖ್ಯತೆ ಪಡೆದಿದೆ. ಸಾರ್ವಜನಿಕ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಆದ್ಯತೆಬೇಕು. ಸರ್ಕಾರಿ ವಲಯದಲ್ಲಿ ಶೇ.90ರಷ್ಟು, ಬಹುರಾಷ್ಟ್ರೀಯ ಮತ್ತು ಖಾಸಗಿ ಉದ್ದಿಮೆಗಳಲ್ಲೂ ಮೊದಲು ಶೇ.5ರಷ್ಟು ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕೆಲಸ ಮೀಸಲಿರಬೇಕು. ಬಳಿಕ ಶೇ.100ರಷ್ಟು ಅವಕಾಶ ನೀಡಬೇಕೆಂಬುದು ಸೇರಿ ಡಾ. ಮಹಿಷಿ ಆಯೋಗ 1986ರಲ್ಲೇ 58 ಶಿಫಾರಸುಗಳ ಸಮಗ್ರ ವರದಿಯನ್ನ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.

ಸರ್ಕಾರಗಳು ಹೊಸ ಕಾನೂನು ತರಲು ಹಿಂದೇಟು!:12 ಶಿಫಾರಸಿಗೆ ಸರ್ಕಾರ ಒಪ್ಪಲಿಲ್ಲ. ಬಹುರಾಷ್ಟ್ರೀಯ, ಖಾಸಗಿ ಕಂಪನಿಗಳಲ್ಲಿ ಈ ಶಿಫಾರಸು ಪಾಲಿಸಬೇಕು, ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು ಎನ್ನುವ ಪ್ರಮುಖ ಶಿಫಾರಸಿಗೆ ಈವರೆಗೆ ಸರ್ಕಾರಗಳು ಸೈ ಎಂದಿಲ್ಲ. ಹಾಗಾಗಿ ರಾಜ್ಯದ ಉದ್ಯೋಗಗಳು ಕನ್ನಡಿಗರಿಗೆ ಲಭ್ಯವಾಗದೆ ಅನ್ಯ ರಾಜ್ಯದವರ ಪಾಲಾಗುತ್ತಿವೆ. ಇದರ ಮಧ್ಯೆಯೇ ಫೆಬ್ರವರಿ 13ಕ್ಕೆ ರಾಜ್ಯ ಬಂದ್‌ಗೆ ಕರೆ ನೀಡಲಾಗಿದೆ. ರಾಜ್ಯ ಮಟ್ಟದಲ್ಲಿ ಈ ಹೋರಾಟಕ್ಕೆ ಬೆಂಬಲಿಸಬೇಕಿದ್ದ ಕೆಲ ಸಂಘಟನೆಗಳು ಇದರಿಂದ ಹಿಂದೆ ಸರಿದಿವೆ.

ಮುಖ್ಯವಾಗಿ ಮೂರು ಹಕ್ಕೊತ್ತಾಯಗಳು:

1) ಇಂದಿಗೆ ಹೊಂದುವಂತೆ ಸರೋಜಿನಿ ಮಹಿಷಿ ವರದಿ ಪರಿಷ್ಕರಿಸಲು ತಜ್ಞರ ಸಮಿತಿ ರಚನೆ

2) ಹೊಸ ಸಮಿತಿಯ ಶಿಫಾರಸ್ಸಿನನ್ವಯ ಪರಿಷ್ಕರಿಸಿದ ಸರೋಜಿನಿ ಮಹಿಷಿ ವರದಿಯನ್ನ ರಾಜ್ಯ ಸರ್ಕಾರ ಅಂಗೀಕರಿಸಿ ಕಾನೂನಿನ ಮಾನ್ಯತೆ ಒದಗಿಸಬೇಕು.

3) ಹೊಸ ವರದಿಯ ಅನ್ವಯ ಕರ್ನಾಟಕದಲ್ಲಿನ ಎಲ್ಲ ಉದ್ಯೋಗಗಳಲ್ಲಿ ಸಿಂಹಪಾಲು ಕನ್ನಡಿಗರಿಗೆ ಸಿಗುವಂತೆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

ಈ ಸರ್ಕಾರ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ಬಗ್ಗೆ ಒಂದಿಷ್ಟು ಮಾತಾಡಿದೆ. ಆ ಕಾಯ್ದೆ ತರಲು ಯಡಿಯೂರಪ್ಪ ಸರ್ಕಾರ ಒಪ್ಪುತ್ತಾ, ನಾಳಿನ ಬಂದ್‌ ಯಾವ ಸ್ವರೂಪ ನೀಡುತ್ತೋ ನೋಡ್ಬೇಕು.

ABOUT THE AUTHOR

...view details