ಬೆಂಗಳೂರು : ಇಂದು ಕನ್ನಡ ಚಿತ್ರರಂಗದ ಆರಾಧ್ಯದೈವ, ಕನ್ನಡಿಗರ ಕಣ್ಮಣಿ, ನಟಸಾರ್ವಭೌಮ ಡಾ ರಾಜ್ ಕುಮಾರ್ ಅವರ ಜನ್ಮ ದಿನ. ಅಣ್ಣಾವ್ರು ಇಂದು ಬದುಕಿದ್ದರೆ 94ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅಣ್ಣಾವ್ರು ನಮ್ಮೊಂದಿಗೆ ದೈಹಿಕವಾಗಿ ಇಲ್ಲದಿದ್ದರೂ ಇವತ್ತಿಗೂ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿದ್ದಾರೆ.
ಇನ್ನು ಪ್ರತಿವರ್ಷ ರಾಜ್ ಅಭಿಮಾನಿಗಳು,ವಿವಿಧ ಜಿಲ್ಲೆಗಳಲ್ಲಿ ಅನ್ನದಾನ, ರಕ್ತದಾನ ಮಾಡುವ ಮೂಲಕ ವಿಶೇಷವಾಗಿ ರಾಜ್ ಜನ್ಮದಿನವನ್ನು ಆಚರಣೆ ಮಾಡುತ್ತಾರೆ. ಆದರೆ, ಕಳೆದ ಎರಡು ವರ್ಷಗಳಿಂದ, ಲಾಕ್‌ಡೌನ್ ಇದ್ದ ಕಾರಣ, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸ್ಮಾರಕಕ್ಕೆ, ಕುಟುಂಬದವರಿಗೆ ಪೂಜೆ ಸಲ್ಲಿಸಲು ಆಗಿರಲಿಲ್ಲ. ಈ ವರ್ಷ ಯಾವುದೇ ಅಡೆತಡೆ ಇಲ್ಲದೇ ನಟ ರಾಘವೇಂದ್ರ ರಾಜ್ ಕುಟುಂಬ ಮತ್ತು ಸಹೋದರಿ ಲಕ್ಷ್ಮಿ ಕುಟುಂಬದವರಿಂದ ರಾಜ್ ಸ್ಮಾರಕಕ್ಕೆ ಪೂಜೆ ಮಾಡುವ ಮೂಲಕ 94ನೇ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ವೇಳೆ ಸಾಹಿತಿ ಬರಗೂರು ರಾಮಚಂದ್ರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಹಾಗೂ ಸಚಿವರಾದ ಮುನಿರತ್ನ, ಗೋಪಾಲಯ್ಯನವರು ಕೂಡ ರಾಜ್ ಕುಮಾರ್ ಸ್ಮಾರಕಕ್ಕೆ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, ಇದು ದೇಶದಲ್ಲಿ ನಡೆಯುವ ವಿಸ್ಮಯ. ಯಾಕೆಂದರೆ, ರಾಜ್ ಕುಮಾರ್ ಅವರು ಬರೀ ನಟರಾಗಿ ಇದ್ದವರಲ್ಲ, ಜನರನ್ನು ಅಭಿಮಾನಿ ದೇವರುಗಳು ಅಂತಾ ಕರೆದವರು.
ಪೊಲೀಸ್ ಇಲಾಖೆ ₹60 ಲಕ್ಷ ನೆರವು :ಯಾಕೆ ರಾಜ್ ಕುಮಾರ್ ಅವರ 94ನೇ ಹುಟ್ಟು ಹಬ್ಬ ಇಷ್ಟು ಅದ್ದೂರಿಯಾಗಿ ಆಚರಿಸಲಾಗುತ್ತದೆ ಎಂದರೆ, ರಾಜ್ ಕುಮಾರ್ ದೊಡ್ಡ ನಟರಾಗಿದ್ದರೂ, ಅವರ ಸರಳತೆ, ಪ್ರತಿಯೊಬ್ಬರಿಗೆ ಕೊಡುತ್ತಿದ್ದ ಗೌರವ ಎಲ್ಲರಿಗೂ ಮಾದರಿಯಾಗಿತ್ತು. ಆ ಕಾಲದಲ್ಲಿ ರಾಜ್ ಕುಮಾರ್ ಅವರು ಪೊಲೀಸ್ ಇಲಾಖೆಗೆ 60ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದರು. ಜೊತೆಗೆ ಸಂಗೀತ ರಸಸಂಜೆ ಕಾರ್ಯಕ್ರಮಗಳನ್ನು ಮಾಡಿ ಅಣ್ಣಾವ್ರು ಕಷ್ಟದಲ್ಲಿರುವ ಕಲಾವಿದರು ಹಾಗೂ ನಾಟಕ ಕಂಪನಿಗಳಿಗೆ ಸಹಾಯ ಮಾಡುತ್ತಿದ್ದರು. ಹಾಗೇ ನೇತ್ರದಾನ ಮಾಡುವ ಮೂಲಕ ಅಣ್ಣಾವ್ರು ಇತಿಹಾಸದ ಪುಟಗಳಲ್ಲಿ ಉಳಿದಿದ್ದಾರೆ ಎಂದು ಅಣ್ಣಾವ್ರುನ್ನ ಸ್ಮರಿಸಿದರು.
ಇದು ಜನಗಳ ಹಬ್ಬ, ನಮ್ಮ ಮನೆ ಹಬ್ಬವಲ್ಲ:ಬಳಿಕ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್, ಕಳೆದ ಮೂರು ವರ್ಷಗಳಿಂದ ಸರಿಯಾಗಿ ಜನ್ಮದಿನಾಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಈ ಜಾಗದಲ್ಲಿ ನಾವು ಅವರ ಮೌಲ್ಯಗಳನ್ನ ನೆನೆಪಿಸಿಕೊಳ್ಳಬೇಕು. ನಮ್ಮ ಮನೆಯ ಮೂರು ಜನ ನೇತ್ರ ದಾನ ಮಾಡಿದ್ದಾರೆ. ಇಂದು ಅಭಿಮಾನಿಗಳು ಈ ಜನ್ಮಸ್ಥಳದಿಂದ ಪುಣ್ಯಸ್ಥಳದವರೆಗೆ ಯಾತ್ರೆ ಮಾಡ್ಕೊಂಡು ಬರ್ತಿದ್ದಾರೆ. ಇದು ಜನಗಳ ಹಬ್ಬ, ನಮ್ಮ ಮನೆ ಹಬ್ಬ ಅಲ್ಲ. ಇದರಲ್ಲಿ ನಾನು ಒಬ್ಬ ಅಭಿಮಾನಿಯಾಗಿ ಸೇರ್ಕೊಂಡಿದ್ದೀನಿ. ನಾವು ಮಾಡುವ ಒಳ್ಳೆ ಕೆಲಸ ಮಾತ್ರ ನಿರಂತರವಾಗಿ ಇರುತ್ತದೆ ಎಂದು ನನ್ನ ತಂದೆಯವರು ಹೇಳ್ತಾ ಇದ್ರು. ಅವರ ಸೇವೆ, ಅವರ ಪ್ರೀತಿ ಎಲ್ಲರನ್ನು ಇಲ್ಲಿಯವರೆಗೆ ಕರೆ ತರುತ್ತಿದೆ ಎಂದು ಹೇಳಿದರು.
ಓದಿ :ಆರ್ಜಿವಿ ಹಾಗೂ ರಿಯಲ್ ಸ್ಟಾರ್ ಡೆಡ್ಲಿ ಜೋಡಿ ಎಂದ ಅಭಿನಯ ಚಕ್ರವರ್ತಿ!