ಬೆಂಗಳೂರು: ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತಿನ 26 ನೇ ಅಧ್ಯಕ್ಷರಾಗಿ ನಾಡೋಜ ಡಾ.ಮಹೇಶ ಜೋಷಿ ಆಯ್ಕೆ ಬಹುತೇಕ ಖಚಿತವಾಗಿದೆ.
ರಾಜ್ಯದ ಒಟ್ಟು 420 ಮತಕೇಂದ್ರಗಳಲ್ಲಿ ಭಾನುವಾರ ನಡೆದ ಮತದಾನದಲ್ಲಿ 1.59 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ತಡ ರಾತ್ರಿ ವೇಳೆಗೆ 5 ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳ ಫಲಿತಾಂಶ ಪ್ರಕಟವಾಗಿದೆ. ಇನ್ನೂ ಮತ ಎಣಿಕೆ ನಡೆಯುತ್ತಿದ್ದು, ಕೆಲ ಜಿಲ್ಲೆಗಳ ಅಧ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರ ಅಧಿಕೃತ ಘೋಷಣೆ ಬಾಕಿ ಇದೆ.
ಅಧಿಕೃತ ಘೋಷಣೆ ಬಾಕಿ:
ಮೂಲಗಳ ಪ್ರಕಾರ, ಡಾ.ಮಹೇಶ ಜೋಷಿ ಅವರಿಗೆ ಸುಮಾರು 60 ಸಾವಿರ ಮತಗಳು ಲಭಿಸಿದ್ದು, ಎರಡನೇ ಸ್ಥಾನದಲ್ಲಿರುವ ಡಾ. ಶೇಖರಗೌಡ ಮಾಲಿಪಾಟೀಲ ಅವರಿಗೆ ಸುಮಾರು 20 ಸಾವಿರ ಮತಗಳು ಲಭಿಸಿದೆ.
ಅಂಚೆ ಮೂಲಕ ರವಾನೆಯಾಗುವ ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ಗೋವಾ ಹಾಗೂ ಹೊರ ರಾಜ್ಯದ ಒಟ್ಟು ಮತಗಳ ಸಂಖ್ಯೆ 4,479 ಇದ್ದು, ವಿಳಾಸದಲ್ಲಿ ಮತದಾರ ಇಲ್ಲದ ಕಾರಣಕ್ಕೆ ಈಗಾಗಲೇ 1,343 ಮತಗಳು ವಾಪಸ್ ಆಗಿವೆ. ಈ ಮತಗಳ ಎಣಿಕೆ ಬುಧವಾರ ಮಧ್ಯಾಹ್ನ ನಡೆಯಲಿದೆ.
ಆದರೆ ಸದ್ಯ ಪ್ರಥಮ ಹಾಗೂ ದ್ವಿತೀಯ ಅಭ್ಯರ್ಥಿಗಳ ನಡುವಿನ ಅಂತರ ಅಗಾಧವಾಗಿರುವ ಕಾರಣ ಈ ಮತಗಳ ಎಣಿಕೆ ಔಪಚಾರಿಕತೆಗಷ್ಟೆ ಮೀಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಫಲಿತಾಂಶ ಹೊರಬೀಳದ ಜಿಲ್ಲೆಗಳು:ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಫಲಿತಾಂಶ ಇನ್ನೂ ಅಧಿಕೃತವಾಗಿ ಲಭ್ಯವಾಗಿಲ್ಲ.