ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಭೀತಿ ಕೊಂಚ ಕಡಿಮೆಯಾಯಿತು ಎನ್ನುವ ಬೆನ್ನಲ್ಲೇ ಇದೀಗ ಆತಂಕ ಶುರುವಾಗಿದೆ. ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಇದಕ್ಕೆ ಕಾರಣ. ಹೀಗಾಗಿ, ರಾಜ್ಯದಲ್ಲಿ ಶಾಲಾರಂಭ ಮಾಡಬೇಕಾ ಅಥವಾ ಬೇಡವಾ? ಎಂಬ ಚರ್ಚೆ ಇನ್ನೂ ನಡೆಯುತ್ತಿದೆ.
ಸರ್ಕಾರ ಏನಾದರೂ ತೀರ್ಮಾನ ಮಾಡಲಿ. ಆಗಸ್ಟ್ ಮೊದಲ ವಾರ ಶಾಲೆ ಆರಂಭಿಸುತ್ತೇವೆ ಎಂದು ಖಾಸಗಿ ಶಾಲೆಗಳು ಟೊಂಕ ಕಟ್ಟಿ ನಿಂತಿವೆ. ಇದರ ಬೆನ್ನೆಲ್ಲೇ ಶಾಲಾರಂಭದ ಕುರಿತು ಜಯದೇವ ಆಸ್ಪತ್ರೆಯ ನಿರ್ದೇಶಕರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಡಾ.ಸಿ ಎನ್ ಮಂಜುನಾಥ್ ಅವರು ಶಾಲೆಗಳನ್ನ ಆರಂಭ ಮಾಡುವ ಸೂಕ್ಷ್ಮ ವಿಷಯದಲ್ಲಿ ದುಡುಕುವುದು ಬೇಡ ಎಂದು ಎಚ್ಚರಿಸಿದ್ದಾರೆ.
ಈ ಕುರಿತು ದೂರವಾಣಿ ಮೂಲಕ ಮಾತಾನಾಡಿ ಮಾಹಿತಿ ನೀಡಿರುವ ಅವರು, ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಇಂತಹ ಸಮಯದಲ್ಲಿ ಆ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕದಲ್ಲಿ ಶಾಲೆ ಆರಂಭಿಸಲು ಇನ್ನೆರಡು ವಾರಗಳ ಕಾಲ ಕಾದು ನೋಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಮೊದಲ ಹಾಗೂ 2ನೇ ಅಲೆಯ ವೇಳೆ ಕೇರಳ, ಮಹಾರಾಷ್ಟ್ರದಲ್ಲಿ ಕೇಸ್ಗಳು ಏರಿಕೆ ಕಂಡ ಎರಡು ವಾರಗಳ ನಂತರ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿತು. ಹೀಗಾಗಿ, ಈ ಬಾರಿ ಇದೇ ಮಾದರಿಯಲ್ಲಿ ಕೊರೊನಾ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಇಂತಹ ಸೂಕ್ಷ್ಮ ವಿಷಯದಲ್ಲಿ ಆತುರದ ನಿರ್ಧಾರ ತರವಲ್ಲ.
ಇದರ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕಿದೆ. ಮಕ್ಕಳಿಗೆ ಶಾಲೆ ಆರಂಭಿಸುವ ವಾತಾವರಣ ಅಷ್ಟು ಸೂಕ್ತವಾಗಿಲ್ಲ. ಒಂದು ವೇಳೆ ನೆರೆಯ ರಾಜ್ಯದಲ್ಲಿ ಸೋಂಕು ಕಡಿಮೆಯಾಗಿದ್ದರೆ, ಇಲ್ಲಿ ಟ್ರೈಯಲ್ ಮಾಡಬಹುದಿತ್ತು. ಆದರೆ, ಈಗ ಪಕ್ಕದ ರಾಜ್ಯದಲ್ಲಿ ಕೊರೊನಾ ಏರಿಕೆ ಹಿನ್ನೆಲೆ ಇನ್ನೆರಡು ವಾರ ಕಾಯುವುದು ಒಳ್ಳೆಯದು ಎಂದು ತಿಳಿಸಿದರು.
ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಲಸಿಕೆ ಭಾಗ್ಯ :ಸದ್ಯ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ದೊರೆಯುತ್ತಿದೆ. ಮಕ್ಕಳಿಗೆ ಲಸಿಕೆ ಬಂದಿಲ್ಲ. ಹೀಗಿರುವಾಗ ಇದರ ಕುರಿತು ನಿಧಾನಗತಿ ಅನಿವಾರ್ಯ. ಕಾರಣ ನೆರೆ ರಾಜ್ಯದ ಪಕ್ಕದಲ್ಲಿರುವ ಮಂಗಳೂರಿನಲ್ಲಿ ಕೇಸ್ ಏರಿಕೆಯಾಗುತ್ತಿವೆ. ಹಾಗೇ ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಭಾಗದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಾದು ನೋಡಿ ಶಾಲೆ ಆರಂಭಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.