ಬೆಂಗಳೂರು :ವರದಕ್ಷಿಣೆ ಕಿರುಕುಳ ಸಾವು ಪ್ರಕರಣದ ಆರೋಪಿಗಳಿಗೆ ನೀಡಿದ್ದ ಜಾಮೀನು ರದ್ದುಪಡಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡಿದ್ದ ಮೈಸೂರು ಜಿಲ್ಲಾ ನ್ಯಾಯಾಧೀಶರಿಗೆ ನ್ಯಾಯಾಂಗ ಅಕಾಡೆಮಿಯಲ್ಲಿ ತರಬೇತಿ ನೀಡುವಂತೆ ಆದೇಶಿಸಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಸುನಿಲ್ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್ ಪಿ ಸಂದೇಶ್ ಅವರಿದ್ಧ ಪೀಠ, ಈ ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ಪ್ರಕರಣದ ಆರೋಪಿಗಳಾದ ಮಂಜು (ಪತಿ) ಹಾಗೂ ಶಿವಮ್ಮ (ಅತ್ತೆ)ಗೆ ಎಂಬುವರಿಗೆ ನೀಡಿದ್ದ ಜಾಮೀನು ರದ್ದುಪಡಿಸಿದೆ.
ಘೋರ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡುವ ಮುನ್ನ ನ್ಯಾಯಾಂಗ ವಿವೇಚನೆ ಬಳಸುವುದನ್ನು ನ್ಯಾಯಾಧೀಶರು ತಿಳಿಯಬೇಕಿದೆ. ಆದ್ದರಿಂದ, ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗೆ ಕಳುಹಿಸಿ ಎಂದು ನಿರ್ದೇಶಿಸಿದೆ.
ಹೈಕೋರ್ಟ್ ಹೇಳಿದ್ದೇನು?:ವರದಕ್ಷಿಣೆ ಸಾವಿನಂತಹ ಘೋರ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಮುನ್ನ ವಿಚಾರಣಾ ನ್ಯಾಯಾಲಯವು ನ್ಯಾಯಾಂಗ ವಿವೇಚನೆ ಸರಿಯಾಗಿ ಬಳಸಿಲ್ಲ. ವಕ್ರ ಮತ್ತು ವಿಚಿತ್ರವಾದ ಆದೇಶಗಳನ್ನು ಹೊರಡಿಸಿದೆ. ವಿಚಾರಣಾ ನ್ಯಾಯಾಲಯ ತನ್ನ ಆದೇಶದಲ್ಲಿ, ಆರೋಪಿಗಳ ವಿರುದ್ಧ ಜೀವಾವಧಿ ಅಥವಾ ಮರಣದಂಡನೆ ವಿಧಿಸುವಂತಹ ಆರೋಪಗಳಿಲ್ಲ.
ಮೃತ ಸುನಿತಾ ಧ್ವನಿಮುದ್ರಿಕೆ ನೆರೆಮನೆಯವರ ಬಳಿ ಸಿಕ್ಕ ನಂತರವೇ ದೂರು ದಾಖಲಿಸಲಾಗಿದೆ. ಮೊಬೈಲ್ ಆಕೆಯದ್ದೇ ಅಥವಾ ಬೇರೆಯವರದ್ದೇ ಎಂಬುದನ್ನು ಹಾಗೂ ವಾಯ್ಸ್ ಮೆಸೇಜ್ನಲ್ಲಿರುವ ಧ್ವನಿ ಯಾರದ್ದು ಎಂಬುದನ್ನು ವಿಚಾರಣೆ ವೇಳೆ ಗುರುತಿಸಬೇಕಾಗುತ್ತದೆ.
ಹೀಗಾಗಿ, ಆರೋಪಿಗಳಿಗೆ ಜಾಮೀನು ನೀಡಬಹುದು ಎಂದಿದೆ. ಪ್ರಾಸಿಕ್ಯೂಷನ್ ಪರ ಅಭಿಯೋಜಕರು, ಧ್ವನಿ ಮೃತ ಸುನಿತಾರದ್ದೇ ಆಗಿದ್ದು, ಆರೋಪಿಗಳಿಗೆ ಜಾಮೀನು ನೀಡಬಾರದು. ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು. ಮದುವೆಯಾದ ಹೊಸತರಲ್ಲೇ ವರದಕ್ಷಿಣೆ ವಿಚಾರವಾಗಿ ಜಗಳ ನಡೆದು ಪಂಚಾಯ್ತಿ ನಡೆಸಲಾಗಿದೆ.
ಸುನಿತಾ ಪೋಷಕರು ಹಣ ನೀಡುವ ಭರವಸೆ ನೀಡಿದ್ದರು ಎಂಬ ಅಂಶಗಳನ್ನು ತಿಳಿಸಿದ್ದರೂ ವಿಚಾರಣಾ ನ್ಯಾಯಾಲಯ ಪರಿಗಣಿಸದೆ ಆರೋಪಿಗಳಿಗೆ ಜಾಮೀನು ನೀಡಿರುವುದು ಅತ್ಯಂತ ವಕ್ರ ಮತ್ತು ವಿಚಿತ್ರವಾಗಿದೆ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಹಾಗೆಯೇ, ಆರೋಪಿಗಳ ಜಾಮೀನು ರದ್ದುಪಡಿಸಿ, ನ್ಯಾಯಾಧೀಶರಿಗೆ ತರಬೇತಿ ನೀಡಲು ಸೂಚಿಸಿದೆ.
ಪ್ರಕರಣದ ಹಿನ್ನೆಲೆ:ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಸುನಿತಾ ಹಾಗೂ ಮಂಜು ಎಂಬುವರ ಮದುವೆ 2020ರ ಫೆ.16ರಂದು ನಡೆದಿತ್ತು. ಸುನಿತಾ ಪೋಷಕರು ಸಾಕಷ್ಟು ಒಡವೆ ಹಾಗೂ ₹3.5 ಲಕ್ಷ ಹಣ ನೀಡಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಎರಡು ತಿಂಗಳಲ್ಲೇ ಮನೆ ನಿರ್ಮಾಣ ಮಾಡುವುದಾಗಿ ಹೇಳಿದ್ದ ಪತಿ ಮಂಜು, ಪತ್ನಿ ಸುನೀತಾಗೆ ತವರಿನಿಂದ 6 ಲಕ್ಷ ರೂಪಾಯಿ ತರುವಂತೆ ಜಗಳ ಮಾಡಿ ತವರಿಗೆ ಕಳುಹಿಸಿದ್ದ.
ಈ ವಿಚಾರವಾಗಿ ಸಂಬಂಧಿಕರು ಪಂಚಾಯ್ತಿ ನಡೆಸಿದ್ದರು. ಬಳಿಕ ಪೋಷಕರು ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದರೂ, ಬೆಳೆ ಕೈಕೊಟ್ಟಿದ್ದರಿಂದ ಭರವಸೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಮತ್ತಷ್ಟು ಸಿಟ್ಟಿಗೆದ್ದಿದ್ದ ಮಂಜು, ಸುನಿತಾಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ತಂದೆಯ ಆಸ್ತಿಯಲ್ಲಿ ಪಾಲು ಕೇಳುವಂತೆ ಪೀಡಿಸುತ್ತಿದ್ದ. 2021ರ ಫೆ.14ರಂದು ಸುನಿತಾ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು.
ಸುನಿತಾ ಸಾವಿನ ಬಳಿಕ ಆಕೆ ಸಾವಿಗೆ ಮುನ್ನವೇ ತನ್ನ ತವರಿನ ನೆರೆಮನೆಯವರ ಮೊಬೈಲ್ಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಬೆಳಕಿಗೆ ಬಂದಿತ್ತು. ಪತಿ ಮಂಜು ಮೊಬೈಲ್ನಿಂದ ಕಳುಹಿಸಿದ್ದ ವಾಯ್ಸ್ ಮೆಸೇಜ್ನಲ್ಲಿ ತನಗೆ ಏನಾದರೂ ತೊಂದರೆಯಾದರೆ, ಅದಕ್ಕೆ ಪತಿ ಮಂಜು, ಅತ್ತೆ ಶಿವಮ್ಮ ಹಾಗೂ ಮಾವ ರಾಜಪ್ಪರೇ ಜವಾಬ್ದಾರರು ಎಂದಿತ್ತು.
ಈ ಮೆಸೇಜ್ ಸಿಕ್ಕ ಬಳಿಕ ಸುನಿತಾ ಸಹೋದರ ಸುನಿಲ್ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498ಎ (ವರದಕ್ಷಿಣೆ ಕಿರುಕುಳ) 304ಬಿ (ವರದಕ್ಷಿಣೆ ಸಾವು) ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3, 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2021ರ ಏಪ್ರಿಲ್‌ನಲ್ಲಿ ಆರೋಪಿಗಳಿಗೆ ಜಾಮೀನು ನೀಡಿತ್ತು. ಬಳಿಕ, ಜಾಮೀನನ್ನು ರದ್ದು ಕೋರಿ ಸುನಿಲ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಓದಿ:ಲವ್-ಸೆಕ್ಸ್-ದೋಖಾ ಆರೋಪ ಪ್ರಕರಣ: ಬೆಳಗಾವಿಯಲ್ಲಿ ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ