ಬೆಂಗಳೂರು: ಆಗಸ್ಟ್ ಮೊದಲ ವಾರವನ್ನು ಸ್ತನ್ಯಪಾನ ಸಪ್ತಾಹ ಎಂದು ಆಚರಿಸಲಾಗುತ್ತದೆ. ಹಾಲುಣಿಸುವ ಮಹಿಳೆಯರಿಗೆ ಕೋವಿಡ್ ವರದಾನವಾಗಿ ಪರಿಣಮಿಸಿದೆ. ಹಿಂದೆಲ್ಲ ಕೆಲಸದ ಒತ್ತಡಕ್ಕೆ ಸಿಲುಕಿ ಮಕ್ಕಳಿಗೆ ಹಾಲುಣಿಸಲು ಸಮಯದ ಅಭಾವ ಕಾಡುತ್ತಿತ್ತು. ಆದರೆ, ಈಗ ಮನೆಯಲ್ಲೇ ಕೆಲಸ ಮಾಡುತ್ತಿರುವುದರಿಂದ ಬಹುತೇಕ ತಾಯಂದಿರು ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಹಾಲುಣಿಸಲು ಸಾಧ್ಯವಾಗುತ್ತಿದೆ.
ತಾಯಿಯಾದ ಪ್ರತಿಯೊಬ್ಬರೂ ಹಾಲುಣಿಸುವ ಮಹತ್ವವನ್ನು ತಿಳಿದಿರಲೇಬೇಕು. ಅದರಲ್ಲಿ ಕೆಲವು ಅಂಶಗಳನ್ನು ನಗರದ ಖ್ಯಾತ ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯೆ ಡಾ. ಜಾಯ್ಸ್ ಜಯಶೀಲನ್ ತಿಳಿಸಿದ್ದಾರೆ.
ಜನಿಸಿದ ಒಂದು ಗಂಟೆಯಲ್ಲೇ ಹಾಲು ನೀಡಿ:
ಮಗುವಿನ ಆರೋಗ್ಯಕರ ಬೆಳವಣಿಗೆಗೆ ಮಗು ಜನಿಸಿದ ಒಂದು ಗಂಟೆಯೊಳಗಾಗಿ ಹಾಲುಣಿಸಿದರೆ ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳವಾಗಲು ಸಹಕಾರಿಯಾಗಲಿದೆ. ಮೊದಲ 3 ದಿನ ಬರುವ ಗೀಬಿನ ಹಾಲು( ಕೊಲೊಸ್ಟ್ರೋಮ್) ಮಗುವಿಗೆ ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡಲಿದೆ.
ಕೊಲೊಸ್ಟ್ರೋಮ್‌ನಲ್ಲಿ ಪೌಷ್ಠಿಕಾಂಶ ಉತ್ಕೃಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ತಾಯಿಯು ಮಗುವಿಗೆ ಹಾಲುಣಿಸಲು ಪ್ರಾರಂಭಿಸಿದ ಪ್ರಾರಂಭದಲ್ಲಿ ಹಳದಿ ವರ್ಣದ ಗಟ್ಟಿಹಾಲು ಬರುತ್ತದೆ. ಇದು ಮಗುವಿನ ಬೆಳವಣಿಗೆ ಮೊದಲ ಲಸಿಕೆ ಇದ್ದಂತೆ ಎನ್ನುತ್ತಾರೆ ಡಾ. ಜಾಯ್ಸ್.
ಹಾಲು ಬಿಟ್ಟು ಬೇರೆ ಏನನ್ನೂ ನೀಡಬೇಡಿ:
ಮಕ್ಕಳ ಬೆಳವಣಿಗೆಗೆ ಕೆಲವರು ಎದೆಹಾಲಿನ ಜೊತೆಗೆ ಜೇನು, ರಾಗಿ ಗಂಜಿಯಂಥ ಆಹಾರವನ್ನು ಕೊಡಲು ಮುಂದಾಗುತ್ತಾರೆ. ಆದರೆ ಇದು ಅಪಾಯಕಾರಿ. 6 ತಿಂಗಳು ತುಂಬುವವರೆಗೂ ಮಗುವಿಗೆ ಎದೆ ಹಾಲು ಹೊರತು ಪಡಿಸಿ ಯಾವುದೇ ರೀತಿಯ ಆಹಾರವಾಗಲಿ, ನೀರಾಗಿ ಕೊಡಬಾರದು. (ವೈದ್ಯರು ನೀಡಿದ ಔಷಧ ಹೊರತು ಪಡಿಸಿ) ಆರು ತಿಂಗಳ ಬಳಿಕ ಮಗುವಿನ ಬೆಳವಣಿಗೆಗೆ ಎದೆಹಾಲಿನೊಂದಿಗೆ ಪೂರಕ ಪೋಷಕ ಮೆದು ಆಹಾರ ಆರಂಭಿಸಬಹುದು ಎಂದು ಹೇಳುತ್ತಾರೆ.