ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯು ಈಗಾಗಲೇ ಮೊದಲ ಪಿಯು ತರಗತಿಗಳ ವಾರ್ಷಿಕ ಪರೀಕ್ಷೆಗಳನ್ನು ರದ್ದು ಮಾಡಿ ಎಲ್ಲ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಿದೆ. ಅವರ ಕಲಿಕೆಯ ನಿರಂತರತೆ ಕಾಪಾಡುವ ಉದ್ದೇಶದಿಂದಷ್ಟೇ ಮೌಲ್ಯಮಾಪನವೆಂಬ ಔಪಚಾರಿಕ ಪ್ರಕ್ರಿಯೆಯನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಮುಂದಿನ ವರ್ಷಗಳಲ್ಲಿ ಅವರು ವಿವಿಧ ಇಲಾಖೆ/ಸಂಸ್ಥೆಗಳ ವತಿಯಿಂದ ಪಡೆಯಬಹುದಾದ ವಿದ್ಯಾರ್ಥಿ ವೇತನ ಸೌಲಭ್ಯ ಸೇರಿದಂತೆ ಹಲವು ಸವಲತ್ತುಗಳನ್ನು ಪಡೆಯಲು ತೊಂದರೆಯಾಗದೇ ಇರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಮುಂದಿನ ತರಗತಿಗಳಿಗೆ ದಾಖಲಾತಿ ಪಡೆಯಲು ಅನುವು ಮಾಡಿಕೊಡುವ ಮೂಲಕ ಅವರ ಕಲಿಕೆಯ ನಿರಂತರತೆ ಕಾಪಾಡುವ ಉದ್ದೇಶದಿಂದಷ್ಟೇ ಮೌಲ್ಯಮಾಪನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಸುರೇಶ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಇಲಾಖೆಯು ಹೊರಡಿಸಿರುವ ಸುತ್ತೋಲೆಯ ಆಶಯಗಳು ಸ್ಪಷ್ಟವಿವೆ. ಇದರಲ್ಲಿ ಪರೀಕ್ಷೆ ನಡೆಸುವ ಆಶಯ ಇಲ್ಲ. ಯಾವುದೇ ವಿದ್ಯಾರ್ಥಿಯು ಭೌತಿಕವಾಗಿ ಕಾಲೇಜಿಗೆ ಹಾಜರಾಗಬಾರದು. ಅಸೈನ್ಮೆಂಟ್ ಗಳನ್ನು ವಾಟ್ಸ್ಆ್ಯಪ್, ಇಮೇಲ್ ಅಲ್ಲದೇ ಅಂಚೆ ಮೂಲಕವೂ ವಿದ್ಯಾರ್ಥಿಗೆ ತಲುಪಿಸಬಹುದು. ಮಾದರಿ ಪ್ರಶ್ನೆ ಪತ್ರಿಕೆಗಳು ಇಲಾಖೆಯ ವೆಬ್ ಸೈಟ್ ನಲ್ಲಿಯೂ ಲಭ್ಯವಿದೆ. ಇಲಾಖೆಯ ಡಾಟಾಬೇಸ್ ನಲ್ಲಿ ನಮೂದಾಗಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಪ್ರಶ್ನೆ ಪತ್ರಿಕೆಯ ಲಿಂಕ್ ಗಳನ್ನೂ ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.
ಮನೆಯಲ್ಲಿಯೇ ಕುಳಿತು ಅಸೈನ್ಮೆಂಟ್ಗೆ ಉತ್ತರಗಳನ್ನು ಸಿದ್ಧಪಡಿಸಿದ ಬಳಿಕ, ವಿದ್ಯಾರ್ಥಿಗಳು ಅಂಚೆ, ವಾಟ್ಸ್ಆ್ಯಪ್, ಇಮೇಲ್ ಹೀಗೆ ಯಾವ ಮಾದರಿಯಲ್ಲಿಯಾದರೂ ತಮ್ಮ ಕಾಲೇಜಿಗೆ ಸಲ್ಲಿಸುವ ಕ್ರಮ ಅನುಸರಿಸಬಹುದಾಗಿದೆ. ಕನಿಷ್ಠ ಅಂಕಗಳನ್ನು ನೀಡುವುದಲ್ಲದೇ ಉತ್ತರ ಪತ್ರಿಕೆಗಳನ್ನು ಸಲ್ಲಿಸಿದ ವಿದ್ಯಾರ್ಥಿಗಳಿಗೆ ಸೂಕ್ತ ಮೌಲ್ಯಾಂಕನವನ್ನು ನೀಡಲು ಉಪನ್ಯಾಸಕರಿಗೆ ಸೂಚನೆ ನೀಡಲಾಗಿದ್ದು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಇದು ಅತ್ಯವಶ್ಯಕವಾಗಿದೆ ಎಂದಿದ್ದಾರೆ.
ಇದನ್ನು ಪರೀಕ್ಷೆ ಎಂದು ತಪ್ಪಾಗಿ ಪರಿಭಾವಿಸುವುದಾಗಲೀ, ಪಾಸುಫೇಲು ಎಂದು ತಪ್ಪಾಗಿ ಅರ್ಥೈಸುವುದಾಗಲೀ ಮಾಡಬಾರದೆಂದು ಸಚಿವರು, ಉಪನ್ಯಾಸಕರು - ಪ್ರಾಂಶುಪಾಲರು ತಮ್ಮ ಜವಾಬ್ದಾರಿಯನ್ನು ಅರ್ಥೈಸಿಕೊಂಡು ತಮ್ಮ ವಿದ್ಯಾರ್ಥಿಗಳ ಒಳಿತಿಗಾಗಿ ಉದಾತ್ತವಾದ ಮನೋಭಾವದಿಂದ ಈ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಕರೆ ನೀಡಿದ್ದಾರೆ.