ಬೆಂಗಳೂರು : ತಾವು ಸಿಎಂ ಆಗಿದ್ದ ಸಂದರ್ಭ ಆರಂಭಿಸಿದ ಇಂದಿರಾ ಕ್ಯಾಂಟೀನ್ ವ್ಯವಸ್ಥಿತವಾಗಿ ಮುಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿಎಂಗೆ ಬರೆದಿರುವ ಪತ್ರದಲ್ಲಿ ಇಂಥದ್ದೊಂದು ಆತಂಕ ವ್ಯಕ್ತಪಡಿಸಿರುವ ಅವರು, ದುಡಿಯುವ ಕಾರ್ಮಿಕರು, ಬಡವರು ಮುಂತಾದವರ ಹಸಿವನ್ನು ನೀಗಿಸಲು ಬಿಬಿಎಂಪಿ ಮತ್ತು ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗಿತ್ತು.
ಈ ಕ್ಯಾಂಟೀನ್‌ಗಳು ಸುಸೂತ್ರವಾಗಿ ರಾಜ್ಯದ ಉದ್ದಗಲಕ್ಕೂ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದವು. ಆದರೆ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ನಿರಂತರವಾಗಿ ಇಂದಿರಾ ಕ್ಯಾಂಟೀನ್‌ಗಳನ್ನು ವ್ಯವಸ್ಥಿತವಾಗಿ ಮುಚ್ಚಲು ಪ್ರಯತ್ನ ಮಾಡುತ್ತಿರುವಂತೆ ಕಾಣಿಸುತ್ತಿದೆ ಎಂದಿದ್ದಾರೆ.
ಇಂದಿರಾ ಕ್ಯಾಂಟೀನ್ ಮುಚ್ಚದಂತೆ ಸಿಎಂಗೆ ಸಿದ್ದರಾಮಯ್ಯ ಪತ್ರ ಇಂದಿರಾ ಕ್ಯಾಂಟೀನ್ ಮುಚ್ಚದಂತೆ ಸಿಎಂಗೆ ಸಿದ್ದರಾಮಯ್ಯ ಪತ್ರ ಇಂದಿರಾ ಕ್ಯಾಂಟೀನ್‌ಗಳಿಗೆ ಬಿಡುಗಡೆ ಮಾಡಬೇಕಾದ ಹಣವನ್ನು ನಿಗದಿತವಾಗಿ ಬಿಡುಗಡೆ ಮಾಡದೇ ಸತಾಯಿಸಲಾಗುತ್ತಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಕ್ಯಾಂಟೀನ್‌ಗಳಿಗೆ ಸುಮಾರು ₹28 ಕೋಟಿ ಬಿಡುಗಡೆ ಮಾಡದೇ ಸುಮಾರು 6 ತಿಂಗಳಿನಿಂದ ಬಾಕಿ ಉಳಿಸಿಕೊಳ್ಳಲಾಗಿದೆ. 198 ಕ್ಯಾಂಟೀನ್‌ಗಳಿಗೆ ನೀರಿನ ಸಂಪರ್ಕ ಮತ್ತು ಸ್ಯಾನಿಟರಿ ಲೈನನ್ನು ಕೂಡ ಜಲಮಂಡಳಿ ಕಡಿತಗೊಳಿಸಿದೆ.
ಅಲ್ಲದೆ 12 ಅಡುಗೆ ಮನೆಗಳಿಗೂ ನೀರಿನ ಸಂಪರ್ಕ ನಿಲ್ಲಿಸಲಾಗಿದೆ. ಇಂದಿರಾ ಕ್ಯಾಂಟೀನ್‌ನ ಹೆಸರನ್ನು ಬದಲಾಯಿಸಿ ರಾಜಕಾರಣ ಮಾಡಲು ಸಹ ಈ ಹಿಂದೆ ಪ್ರಯತ್ನಿಸಲಾಗಿತ್ತು. ಈ ರೀತಿಯ ಹಲವು ಹುನ್ನಾರಗಳನ್ನು ಮಾಡಿ ಕ್ಯಾಂಟೀನ್‌ಗಳನ್ನು ಮುಚ್ಚಲು ಪ್ರಯತ್ನ ಮಾಡುತ್ತಿರುವಂತೆ ಕಂಡು ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸರ್ಕಾರವು ಹಸಿದವರ, ಬಡವರ, ದೀನರ ಪರವಾಗಿ ಇಲ್ಲ ಎನ್ನುವುದಕ್ಕೆ ಈ ಎಲ್ಲವೂ ಉದಾಹರಣೆಗಳಾಗಿವೆ. ಇತ್ತೀಚೆಗೆ, ಸರ್ಕಾರವು ಹಲವು ರೀತಿಯ ದುಂದು ವೆಚ್ಚದ, ಅಗತ್ಯವಿಲ್ಲದ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.
ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರು ದುಡಿಮೆ ಇಲ್ಲದೇ ಪರಿತಪ್ಪಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ಗಳಲ್ಲಿ ಉಚಿತವಾಗಿ ಆಹಾರವನ್ನು ನೀಡಬೇಕೆಂದು ಈ ಹಿಂದೆ ಪತ್ರ ಬರೆದು ಒತ್ತಾಯಿಸಿದ್ದೆವು.
ಇದಕ್ಕೆ ಹೆಚ್ಚೆಂದರೆ ವರ್ಷಕ್ಕೆ ರೂ.200 ರಿಂದ 250 ಕೋಟಿ ರೂ. ಖರ್ಚು ಬರಬಹುದು. ಹಸಿದವರ ಹೊಟ್ಟೆ ತುಂಬಿಸಲು ಸರ್ಕಾರ ಇಷ್ಟನ್ನೂ ಮಾಡಲು ಮೀನಾಮೇಷ ಎಣಿಸುತ್ತದೆ ಎಂದಾದ್ರೆ ನಿಮ್ಮ ಕಾಳಜಿಯ ಕುರಿತಾಗಿ ಸಂದೇಹ ಹುಟ್ಟುತ್ತಿವೆ.
ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್‌ಗಳು ನಿಲ್ಲದ ಹಾಗೆ ನೋಡಿಕೊಂಡು ಹಸಿದವರ ಹೊಟ್ಟೆ ತುಂಬಿಸುವ ಕೆಲಸವನ್ನು ಮಾಡಬೇಕೆಂದು ಹಾಗೂ ಮುಖ್ಯಮಂತ್ರಿಗಳೇ ಖುದ್ದಾಗಿ ಆಸಕ್ತಿ ವಹಿಸಿ ಸಮಸ್ಯೆ ಪರಿಹರಿಸಬೇಕೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.