ಕರ್ನಾಟಕ

karnataka

ETV Bharat / city

ಶಿವಾಜಿ ಮಹಾರಾಜರ ಜಯಂತಿಯಲ್ಲಿ ರಾಜಕೀಯ ಬೆರೆಸುವುದು ಅಕ್ಷಮ್ಯ: ಡಿಸಿಎಂ ಅಶ್ವತ್ಥ್ ನಾರಾಯಣ್ - ಶಿವಾಜಿ ಮಹಾರಾಜರ ಜಯಂತಿ ವಿವಾದ

ಪ್ರಸಕ್ತ ವರ್ಷವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ನಮ್ಮ ಆಚಾರ ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯವ ಮತ್ತು ಮಾನಸಿಕವಾಗಿ, ದೈಹಿಕವಾಗಿ ವಿದ್ಯಾರ್ಥಿಗಳಿಗೆ ಚೈತನ್ಯ ತುಂಬಬಲ್ಲ ಅಂಶಗಳು ಈ ನೀತಿಯಲ್ಲಿ ಅಡಕವಾಗಿವೆ ಎಂದು ಡಿಸಿಎಂ ತಿಳಿಸಿದರು.

ಡಿಸಿಎಂ ಅಶ್ವತ್ಥ್ ನಾರಾಯಣ್
ಡಿಸಿಎಂ ಅಶ್ವತ್ಥ್ ನಾರಾಯಣ್

By

Published : Feb 21, 2021, 2:34 AM IST

ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಕೇವಲ ಒಂದು ಭಾಷೆಗೆ, ಒಂದು ರಾಜ್ಯಕ್ಕೆ ಸಲ್ಲುವವರಲ್ಲ, ಇಡೀ ದೇಶಕ್ಕೆ ಸಲ್ಲುವ ಅಪ್ರತಿಮ ಶೂರರು. ಅವರ ಜಯಂತಿಯನ್ನು ಯಾವುದೇ ರಾಜಕೀಯ ಉದ್ದೇಶಕ್ಕೆ ಸೀಮಿತಗೊಳಿಸದೇ ಇಡೀ ದೇಶಾದ್ಯಂತ ಪ್ರತಿಯೊಬ್ಬರು ಆಚರಿಸಬೇಕು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರಲ್ಲಿ ಕರ್ನಾಟಕ ಕ್ಷತ್ರೀಯ ಒಕ್ಕೂಟ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮ ಹಾಗೂ ಒಕ್ಕೂಟದ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಇನ್ನಷ್ಟು ಬಲಿಷ್ಠವಾಗಿ ಹೊರಹೊಮ್ಮಬೇಕಾದರೆ ಶಿವಾಜಿ ಮಹಾರಾಜರ ಸಾಹಸ, ಆದರ್ಶ, ಮಾತೃಪ್ರೇಮವನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಹಾಗೂ ಅವರ ಜಯಂತಿಯಲ್ಲಿ ಯಾವುದೇ ರಾಜಕೀಯ ಬೆರೆಸಬಾರದು. ಯಾರಾದರೂ ರಾಜಕೀಯ ಬೆರೆಸಿದರೆ ಅದು ಖಂಡಿತಾ ಅಕ್ಷಮ್ಯ ಎಂದರು.

ಅಖಂಡ ಭಾರತದ ಕನಸು ಹೊತ್ತು ಶ್ರಮಿಸಿದವರು ಶಿವಾಜಿ. ನಮ್ಮ ಮೇಲೆ ದಂಡೆತ್ತಿ ಬಂದ ಆಕ್ರಮಣಕಾರರ ವಿರುದ್ಧ ಹೋರಾಟ ನಡೆಸಿದವರು, ಧರ್ಮ ದ್ರೋಹಿಗಳ ವಿರುದ್ಧ ಹಾಗೂ ಸ್ತ್ರೀಯರನ್ನು ಹಿಂಸಿಸುತ್ತಿದ್ದ ದುರುಳರ ವಿರುದ್ಧ ಕತ್ತಿ ಝಳಪಿಸಿ ಗೆದ್ದವರು ಕೂಡ. ಅವರು ನಮ್ಮ ದೇಶದ ಹೆಮ್ಮೆಯ ಸಂಕೇತ. ಜಗತ್ತಿನಲ್ಲಿ ಸರಿಸಾಟಿ ಇಲ್ಲದ ಮಹಾ ಪರಾಕ್ರಮಿ ಎಂದು ಡಿಸಿಎಂ ಅವರು ಶಿವಾಜಿ ಮಹಾರಾಜರ ಗುಣಗಾನ ಮಾಡಿದರು.

ಬಾಲ್ಯದಿಂದಲೇ ತಮ್ಮ ಮಾತೃಶ್ರೀ ಝೀಜಾ ಭಾಯಿ ಅವರ ಪ್ರೇರಣೆಯೊಂದಿಗೆ ಬೆಳೆದು ಭರತ ಖಂಡದ ಏಳಿಗೆಗಾಗಿ ಜೀವಿತಾವಧಿಯುದ್ಧಕ್ಕೂ ದುಡಿದವರು ಶಿವಾಜಿ ಮಹಾರಾಜರು. ಝೀಜಾ ಭಾಯಿ ಅವರು ನಮ್ಮೆಲ್ಲರಿಗೂ ಪ್ರೇರಣೆ. ಇವತ್ತು ಕ್ಷತ್ರೀಯ ಒಕ್ಕೂಟದ ಮಹಿಳಾ ಘಟಕವೂ ಆರಂಭವಾಗುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು ಉಪ ಮುಖ್ಯಮಂತ್ರಿ.

ಪ್ರಸಕ್ತ ವರ್ಷವೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ನಮ್ಮ ಆಚಾರ ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯವ ಮತ್ತು ಮಾನಸಿಕವಾಗಿ, ದೈಹಿಕವಾಗಿ ವಿದ್ಯಾರ್ಥಿಗಳಿಗೆ ಚೈತನ್ಯ ತುಂಬಬಲ್ಲ ಅಂಶಗಳು ಈ ನೀತಿಯಲ್ಲಿ ಅಡಕವಾಗಿವೆ. ಭಾರವು ವಿಶ್ವಗುರುವಾಗುವ ನಿಟ್ಟಿನಲ್ಲಿ ಈ ನೀತಿಯು ಬಹಳಷ್ಟು ಪೂರಕವಾಗುತ್ತದೆ ಎಂದರು.

ABOUT THE AUTHOR

...view details