ಬೆಂಗಳೂರು: ಮಹಾಮಾರಿ ಕೊರೊನಾದಿಂದ ರಾಜ್ಯ ತತ್ತರಿಸಿದೆ. ಬಡವರು, ಕಾರ್ಮಿಕರು ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇಂತಹ ವಿಷಮ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬ ಆಚರಿಸುವುದು ಸೂಕ್ತವಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಕೊರೊನಾ ಮಹಾಮಾರಿಯ ಉಪಟಳಕ್ಕೆ ಮೂರು ತಿಂಗಳಿಂದ ಇಡೀ ಜಗತ್ತೇ ಗರಬಡಿದು ಕುಳಿತಿದೆ. ಅದಕ್ಕೆ ನಮ್ಮ ದೇಶ ಮತ್ತು ರಾಜ್ಯವೂ ಹೊರತಾಗಿಲ್ಲ. ಈ ರೋಗವು ಸಾಂಕ್ರಾಮಿಕವಾದುದರಿಂದ ಮತ್ತು ಇದಕ್ಕೆ ಔಷಧ ಕಂಡುಹಿಡಿಯದೇ ಇರುವುದರಿಂದ ಅನಿವಾರ್ಯವಾಗಿ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇ ಬೇಕಿದೆ. ಹಾಗಾಗಿ ದೇವಸ್ಥಾನ, ಚಿತ್ರಮಂದಿರ, ಮದುವೆ ಸಮಾರಂಭಗಳಿಂದ ಹಿಡಿದು ಸಾವಿನ ಅಂತ್ಯಕ್ರಿಯೆವರೆಗೆ ನಿರ್ಬಂಧ ಹೇರಲಾಗಿದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯನ್ನು ನಾನು ಪ್ರಸ್ತಾಪಿಸಲು, ಸಾರ್ವಜನಿಕ ಬದುಕಿನಲ್ಲಿ ಸೇವೆ ಸಲ್ಲಿಸುತ್ತಿವ ನಮ್ಮಂತಹವರ ಹುಟ್ಟುಹಬ್ಬ ಆಚರಣೆಗಳು ಯಾವುದೇ ರೀತಿಯಲ್ಲೂ ಜಾರಿಯಲ್ಲಿರುವ ನಿರ್ಬಂಧಗಳ ಉಲ್ಲಂಘನೆಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ನನ್ನ ಜನ್ಮದಿನ ಆಚರಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಮೇ 18ರಂದು ನನ್ನ ಹುಟ್ಟುಹಬ್ಬ ಎಂದು ತಿಳಿದಿರುವ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ನಾಯಕರು ಪ್ರತಿ ವರ್ಷದಂತೆ ಈ ವರ್ಷವೂ ನನ್ನ ಮನೆ ಬಳಿ ಬಂದು ಸೇರಿದರೆ ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ತೀವ್ರ ತೊಂದರೆ ಉಂಟು ಮಾಡಲಿದೆ. ಹಿಂದಿನ ವರ್ಷಗಳು ಬೇರೆ, ಈಗಿನ ಪರಿಸ್ಥಿತಿ ಬೇರೆ ಎಂಬುದನ್ನು ಅಭಿಮಾನಿಗಳು, ಕಾರ್ಯಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಟ್ವೀಟ್ ಮೂಲಕ ದೇವೇಗೌಡರು ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಕಳೆದ ಒಂದು ವಾರದಿಂದ ಹೆಚ್ಚಳವಾಗಿದ್ದು, ನನ್ನನ್ನು ಮತ್ತಷ್ಟು ಚಿಂತೆಗೀಡುಮಾಡಿದೆ. ಪರಿಸ್ಥಿತಿ ಎಲ್ಲಿಗೆ ತಲುಪುತ್ತದೆ ಎಂಬ ಆತಂಕ ಕಾಡುತ್ತಿದೆ. ಆದ ಕಾರಣ ದಯವಿಟ್ಟು ಅಭಿಮಾನಿಗಳು, ಕಾರ್ಯಕರ್ತರು, ನಾಯಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದ್ಧೂರಿಯಾಗಿ ನನ್ನ ಹುಟ್ಟುಹಬ್ಬ ಆಚರಿಸದೇ ನೀವು ಇರುವಲ್ಲಿಂದಲೇ ನಿಮ್ಮ ಅಭಿಮಾನದ ಶುಭಾಶಯ ಅರ್ಪಿಸಬೇಕು ಎಂದು ಕೋರಿದ್ದಾರೆ.
ನಿಮ್ಮ ಅಭಿಮಾನದ ಶಕ್ತಿ ಅಪಾರ. ಅದು ನನಗೆ ಚೈತನ್ಯದಾಯಕ. ನಮ್ಮ ಪಕ್ಷಕ್ಕೂ ಪ್ರೋತ್ಸಾಹದಾಯಕ. ಅದಕ್ಕಾಗಿ ನನ್ನ ಪೂರ್ವಭಾವಿ ಧನ್ಯವಾದಗಳು. ಆದರೆ, ಈ ಬಾರಿ ಮಾತ್ರ ನಿಮ್ಮ ಅಭಿಮಾನ ನೀವಿರುವ ಜಾಗದಿಂದಲೇ ಮೂಡಿಬರಲಿ ಎಂದು ಕಾರ್ಯಕರ್ತರಲ್ಲಿ ಗೌಡರು ಮನವಿ ಮಾಡಿಕೊಂಡಿದ್ದಾರೆ.