ಬೆಂಗಳೂರು:ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಇದೀಗ ಸ್ವತಂತ್ರವಾಗಿ ಅಧಿಕಾರಕ್ಕೆ ಬರಬೇಕು ಎಂದು ಚುನಾವಣಾ ಪೂರ್ವದಲ್ಲೇ ಆಪರೇಷನ್ ಕಮಲದ ಹಾದಿ ಹಿಡಿದಿದೆ. ಅದಕ್ಕಾಗಿ ಪಕ್ಷಕ್ಕೆ ನೆಲೆ ಇಲ್ಲದ ಕಡೆ ಹಾಗೂ ಸ್ವಪಕ್ಷದಲ್ಲಿ ಹೆಚ್ಚು ವಿರೋಧ ಬಾರದ ಕ್ಷೇತ್ರಗಳನ್ನೇ ಬಿಜೆಪಿ ನಾಯಕರು ಆಯ್ಕೆ ಮಾಡಿಕೊಂಡು ಆಪರೇಷನ್ ಕಾರ್ಯಕ್ಕೆ ಮುಂದಾಗಿದ್ದಾರೆ.
ಬಿಜೆಪಿ ಹೈಕಮಾಂಡ್ ನೀಡಿರುವ ಮಿಷನ್ 150 ಗುರಿಯೊಂದಿಗೆ ರಾಜ್ಯ ನಾಯಕರು ಚುನಾವಣಾ ಸಿದ್ಧತಾ ಕಾರ್ಯ ಆರಂಭಿಸಿದ್ದು, ಆಪರೇಷನ್ ಹಾದಿ ಮೂಲಕ ಗುರಿ ತಲುಪುವ ತಂತ್ರ ಅನುಸರಿಸಿದ್ದು, ಇದಕ್ಕಾಗಿ ಹೈಕಮಾಂಡ್ ಒಪ್ಪಿಗೆಯನ್ನೂ ಪಡೆದಿದ್ದಾರೆ. ರಾಜ್ಯ ಬಿಜೆಪಿಯ ಆಪರೇಷನ್ ಪಿತಾಮಹ ಎಂದು ಕರೆಸಿಕೊಳ್ಳುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಲಹೆಯ ಮೇರೆಗೆ ಆಪರೇಷನ್ ಕಮಲ ಮಾಡಲಾಗುತ್ತಿದೆ.
ಟಾರ್ಗೆಟ್ ಉತ್ತರ ಕರ್ನಾಟಕ:ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದ್ದರೂ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಬೇಕು ಎನ್ನುವ ಸಂದೇಶ ಹೈಕಮಾಂಡ್ನಿಂದ ಬಂದಿದೆ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ನಂತರ ನಡೆದ ತವರು ಜಿಲ್ಲೆಯ ಹಾನಗಲ್ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದ್ದರಿಂದ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಅನಾಯಾಸವಾಗಿ ಗೆಲ್ಲಬಹುದಾಗಿದ್ದ ದ್ವಿ ಸದಸ್ಯತ್ವ ಇರುವ ಬೆಳಗಾವಿ ಕ್ಷೇತ್ರದಲ್ಲೇ ಬಿಜೆಪಿಗೆ ಸೋಲಾಗಿದ್ದರಿಂದ ಹೈಕಮಾಂಡ್ ಈ ಎಚ್ಚರಿಕೆ ನೀಡಿದೆ.
ಹಾಗಾಗಿ ಉತ್ತರ ಕರ್ನಾಟಕ ಭದ್ರಕ್ಕೆ ರಾಜ್ಯ ನಾಯಕರು ಮುಂದಾಗಿದ್ದು, ಮೊದಲ ಹಂತವಾಗಿ ಆಪರೇಷನ್ ಹೊರಟ್ಟಿ ನಡೆಸಿದ್ದಾರೆ. ಸತತವಾಗಿ ಏಳು ಬಾರಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಗೆದ್ದು ಬರುತ್ತಿರುವ ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಬಿಜೆಪಿ ಗಾಳ ಹಾಕಿದ್ದು, ಆಪರೇಷನ್ ಸಫಲವಾಗಿದೆ.
ಅಪಾರ ಸಂಖ್ಯೆಯ ಶಿಕ್ಷಕರ ಸಮೂಹದ ಬೆಂಬಲ ಹೊಂದಿರುವ ಹೊರಟ್ಟಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಶಿಕ್ಷಕ ವರ್ಗ ಸೆಳೆದು ಲಿಂಗಾಯತ ಸಮುದಾಯದ ಮತ ಭದ್ರ ಮಾಡಿಕೊಳ್ಳುವ ರಾಜಕೀಯ ಲೆಕ್ಕಾಚಾರ ರಾಜ್ಯ ನಾಯಕರದ್ದಾಗಿದೆ. ಇದರ ಜೊತೆ ಪರಿಷತ್ನಲ್ಲಿ ಬಹುಮತ ಪಡೆದುಕೊಳ್ಳುವ ಮೂಲಕ ಸಭಾಪತಿ ಸ್ಥಾನವನ್ನು ದಕ್ಕಿಸಿಕೊಂಡು ಬಿಲ್ಗಳನ್ನು ಪಾಸ್ ಮಾಡಿಕೊಳ್ಳಲು ಆಗುತ್ತಿರುವ ಹಿನ್ನಡೆಯನ್ನು ತಡೆಯುವ ತಂತ್ರಗಾರಿಕೆಯೂ ಇದೆ.
ಬಿಎಸ್ವೈ ಮನವೊಲಿಕೆ:ಇನ್ನು ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಕರೆ ತಂದಲ್ಲಿ ಯಡಿಯೂರಪ್ಪ ಆಪ್ತ ಮೋಹನ್ ಲಿಂಬಿಕಾಯಿ ಅವರಿಗೆ ಪರಿಷತ್ ಟಿಕೆಟ್ ಕೈತಪ್ಪಲಿದೆ. ಹಾಗಾಗಿ ಮೊದಲು ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿ ನಂತರ ಆಪರೇಷನ್ ಹೊರಟ್ಟಿ ನಡೆಸಲಾಗಿದೆ.
ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಅವರಿಗೆ ಹೊರಟ್ಟಿಯನ್ನು ಭೇಟಿ ಮಾಡಿಸಿ, ಪಕ್ಷ ಸೇರ್ಪಡೆ ಕುರಿತು ರಾಜ್ಯ ನಾಯಕರು ಒಪ್ಪಿಗೆ ಪಡೆದಿದ್ರು. ನಂತರ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿಷಯ ತಿಳಿಸಿ ಮೋಹನ್ ಲಿಂಬಿಕಾಯಿ ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ ಬಿಎಸ್ವೈ ಬೇಸರ ತಣಿಸಿದ್ದಾರೆ.
ಸದ್ಯ ಲಿಂಬಿಕಾಯಿ ಅಸಮಾಧಾನ ಹೊರಹಾಕುತ್ತಿದ್ದರೂ ಯಡಿಯೂರಪ್ಪ ಮೂಲಕ ಅದನ್ನು ತಣಿಸಲಾಗುತ್ತಿದೆ. ಇದನ್ನು ಹೊರತುಪಡಿಸಿದರೆ ಕ್ಷೇತ್ರದಲ್ಲಿ ಅಂತಹ ವಿರೋಧ ಇಲ್ಲ, ಹೈಕಮಾಂಡ್ಗೆ ಒಂದು ಪತ್ರ ಬರೆದು ಕೆಲವರು ಹೊರಟ್ಟಿ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಈಗ ಪರಿಸ್ಥಿತಿ ತಿಳಿಯಾಗಿದ್ದು ಬಹಿರಂಗ ವಿರೋಧ ವ್ಯಕ್ತವಾಗಿಲ್ಲ.
ಇದರ ನಂತರ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಗೆಲ್ಲದ ಕ್ಷೇತ್ರಗಳ ಕಡೆಗೂ ಗಮನ ಹರಿಸಲಾಗುತ್ತಿದೆ. ಪಕ್ಷದಲ್ಲಿ ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕ, ಅಭ್ಯರ್ಥಿ ಇಲ್ಲದ ಕ್ಷೇತ್ರಗಳ ಪಟ್ಟಿ ಮಾಡಿಕೊಂಡಿದ್ದು ಎಲ್ಲೆಲ್ಲಿ ಆಪರೇಷನ್ ಕಮಲ ಮಾಡಬಹುದು ಎನ್ನುವ ಚಿಂತನೆ ಮಾಡಲಾಗಿದೆ. ಹಾಗಾಗಿಯೇ ರಾಜ್ಯ ನಾಯಕರು ಬಿಜೆಪಿ ಸೇರುವ ಶಾಸಕರ ಪಟ್ಟಿ ದೊಡ್ಡದಿದೆ ಎನ್ನುವ ಹೇಳಿಕೆ ನೀಡುತ್ತಿದ್ದಾರೆ.
ಆಪರೇಷನ್ ಹಳೆ ಮೈಸೂರು:ಬಿಜೆಪಿಗೆ ನೆಲೆಯೇ ಇಲ್ಲದ ಹಳೆ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ ಮೂಲಕವೇ ಕೇಸರಿ ಅಧಿಪತ್ಯ ಸ್ಥಾಪಿಸಲು ಮುಂದಾಗಿದೆ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಕೊರತೆ ಮೊದಲಿನಿಂದಲೂ ಇದೆ. ಇಲ್ಲಿ ವರ್ಚಸ್ಸು ಇಲ್ಲದ ನಾಯಕರು ಇರುವ ಕಡೆ ಬಿಜೆಪಿ ಆಪರೇಷನ್ ಮೊರೆ ಹೋಗಿದೆ.