ದೊಡ್ಡಬಳ್ಳಾಪುರ: ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ಮಾತಿದೆ. ಆದ್ರೆ ದೂರದೂರಿಗೆ ಕಳುಹಿಸಿ ಹಾಸ್ಟೆಲ್ನಲ್ಲಿ ಹೆಣ್ಣು ಮಕ್ಕಳನ್ನು ಬಿಟ್ಟು ಓದಿಸೋದು ವಿರಳ. ಆದರೆ ದೊಡ್ಡಬಳ್ಳಾಪುರ ಸರ್ಕಾರಿ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್ಗೆ ತಮ್ಮ ಹೆಣ್ಣು ಮಕ್ಕಳನ್ನು ಸೇರಿಸಲು ಪೋಷಕರು ತುದಿಗಾಲಲ್ಲಿ ನಿಂತಿದ್ದಾರೆ. ಇಲ್ಲಿರುವ ಸೂಕ್ತ ಸೌಲಭ್ಯವೇ ಇದಕ್ಕೆ ಕಾರಣ.
ಇದು ಸರ್ಕಾರಿ ಹಾಸ್ಟೆಲ್ ಆಗಿದ್ರೂ ಯಾವುದೇ ಖಾಸಗಿ ಹಾಸ್ಟೆಲ್ಗೂ ಕಮ್ಮಿ ಇಲ್ಲ ಎನ್ನುವಂತಿದೆ. ಒಂದರ್ಥದಲ್ಲಿ ರೆಸಾರ್ಟ್ನಂತೆ ಸಿಂಗಾರಗೊಂಡಿದೆ.
ಯಾವ ಖಾಸಗಿ ಹಾಸ್ಟೆಲ್ಗೂ ಕಮ್ಮಿ ಇಲ್ಲ ದೊಡ್ಡಬಳ್ಳಾಪುರದ ಸರ್ಕಾರಿ ಹಾಸ್ಟೆಲ್ ರಾತ್ರಿ ವೇಳೆ ವಿದ್ಯುತ್ ದೀಪಗಳಿಂದ ಕಟ್ಟಡ ಕಂಗೊಳಿಸಿದರೆ, ಮೆಟ್ಟಿಲು, ಕಿಟಕಿ ಮತ್ತು ಕಾರಿಡಾರ್ನಲ್ಲಿ ಜೋಡಿಸಿಟ್ಟಿರುವ ಅಲಂಕಾರಿಕ ಗಿಡಗಳು, ಹಾಸ್ಟೆಲ್ ಅವರಣದಲ್ಲಿನ ಕೈತೋಟ ಬಹಳ ಆಕರ್ಷಣೀಯವಾಗಿವೆ. ಬಾಲಕಿಯರ ಸುರಕ್ಷತೆಗಾಗಿ ಕಟ್ಟಡದ ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ.
ಉತ್ತಮ ಗುಣಮಟ್ಟದ ಹಾಸಿಗೆ ಮತ್ತು ದಿಂಬಿನ ವ್ಯವಸ್ಥೆ ಮಾಡಲಾಗಿದೆ. ಅಧ್ಯಯನಕ್ಕಾಗಿ ಸ್ಟಡಿ ರೂಮ್, ಕಂಪ್ಯೂಟರ್ ಮತ್ತು ಗ್ರಂಥಾಲಯ ಸೌಲಭ್ಯ ಇದೆ. ಸಂಜೆಯ ನಂತರ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಟ್ಯೂಷನ್ ಸಹ ತೆಗೆದುಕೊಳ್ಳುತ್ತಾರೆ.
ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ, ಎಣ್ಣೆ, ಶ್ಯಾಂಪೂ, ಸಾಬೂನು, ಟೂತ್ ಪೇಸ್ಟ್ಗಳನ್ನು ನೀಡಲಾಗುವುದು. ಬೆಳಗಿನ ತಿಂಡಿ, ಊಟ ಇದರ ಜೊತೆಗೆ ಸ್ನ್ಯಾಕ್ಸ್, ಟೀ. ಕಾಫೀ, ಹಾರ್ಲಿಕ್ಸ್ ಸಹ ಕೊಡಲಾಗುತ್ತದೆ. ತಿಂಗಳಿಗೆ ಎರಡು ದಿನ ಚಿಕನ್ ನೀಡಲಾಗುತ್ತದೆ. ಪ್ರತಿ ದಿನ ಮೊಟ್ಟೆ ಕೊಡಲಾಗುತ್ತದೆ.
ಇದನ್ನೂ ಓದಿ:ಯಾವುದೇ ಖಾಸಗಿ ವಸತಿ ನಿಲಯಕ್ಕೂ ಕಮ್ಮಿ ಇಲ್ಲ ಉಡುಪಿಯ ಈ ಸರ್ಕಾರಿ ಹಾಸ್ಟೆಲ್..
ಬಡತನ ಮತ್ತು ಸಾರಿಗೆ ಸೌಲಭ್ಯ ಇಲ್ಲದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಹಾಸ್ಟೆಲ್ ಸೇರಿಕೊಂಡಿದ್ದಾರೆ. ಇದರ ಹೊರತಾಗಿಯೂ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಸಾಧಿಸುವ ಕಾರಣಕ್ಕೆ ಮತ್ತು ಮೊಬೈಲ್ ನಿಂದ ದೂರ ಇಡುವ ಕಾರಣಕ್ಕೆ ತಮ್ಮ ಮಕ್ಕಳನ್ನು ಈ ಹಾಸ್ಟೆಲ್ಗೆ ಸೇರಿಸಿದ್ದಾರೆ.
ಈ ಹಾಸ್ಟೆಲ್ಗೆ ಸೇರಿದ ನಂತರ ವಿದ್ಯಾರ್ಥಿನಿಯರಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಉತ್ತಮ ಅಂಕಗಳನ್ನ ಗಳಿಸುತ್ತಿದ್ದಾರೆ, ಇದೇ ಹಾಸ್ಟೆಲ್ನಲ್ಲಿದ್ದ ಬಾಲಕಿಯರು ಸರ್ಕಾರಿ ಉದ್ಯೋಗಿಗಳಾಗಿ ಸ್ವಾವಲಂಬಿ ಜೀವನ ಮಾಡುತ್ತಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಎಲ್ಲ ಸರ್ಕಾರಿ ಹಾಸ್ಟೆಲ್ಗಳು ಇದೇ ರೀತಿ ಉತ್ತಮ ಸೌಲಭ್ಯ ಹೊಂದಿದರೆ ವಿದ್ಯಾರ್ಥಿನಿಯರಿಗೆ ಸಹಕಾರಿಯಾಗಲಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ