ಕರ್ನಾಟಕ

karnataka

ETV Bharat / city

ರಾಜ್ಯದ ಜೈವಿಕ ಇಂಧನ ಉತ್ಪಾದನಾ ಸಾಮರ್ಥ್ಯ ಎಷ್ಟು ಗೊತ್ತಾ? - ಜೈವಿಕ ಇಂಧನ ಉತ್ಪಾದನೆ

10 ವರ್ಷಗಳಿಂದ ಸರ್ಕಾರ ಹತ್ತಾರು ಕೋಟಿ ವಿನಿಯೋಗಿಸಿ ಜೈವಿಕ ಇಂಧನ ಉತ್ಪಾದನೆಗೆ ಒತ್ತು ನೀಡುತ್ತಾ ಬಂದಿದ್ದರೂ ಕೇವಲ 4 ಕಂಪನಿಗಳು ಮಾತ್ರ ಜೈವಿಕ ಇಂಧನ ಉತ್ಪಾದನೆ ಮಾಡುತ್ತಿವೆ. ಅದು ಕೂಡ ಅಲ್ಪ ಪ್ರಮಾಣದ ಇಂಧನ ಉತ್ಪಾದನೆಯಾಗಿದೆ. ಗಳೂರು,ತುಮಕೂರು,ಧಾರವಾಡ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದೊಂದು ಜೈವಿಕ ಇಂಧನ ಉತ್ಪಾದನಾ ಘಟಕಗಳಿವೆ.

ರಾಜ್ಯದ ಜೈವಿಕ ಇಂಧನ ಉತ್ಪಾದನಾ ಸಾಮರ್ಥ್ಯ ಎಷ್ಟು ಗೊತ್ತಾ?
ರಾಜ್ಯದ ಜೈವಿಕ ಇಂಧನ ಉತ್ಪಾದನಾ ಸಾಮರ್ಥ್ಯ ಎಷ್ಟು ಗೊತ್ತಾ?

By

Published : Oct 26, 2021, 4:22 PM IST

ಬೆಂಗಳೂರು:ರಾಜ್ಯದಲ್ಲಿ ಪರ್ಯಾಯ ಇಂಧನ ಮೂಲವಾಗಿ ಜೈವಿಕ ಇಂಧನ ಉತ್ಪಾದನೆಗೆ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಿದ್ದು, ಯೋಜನೆಗಳ ಅನುಷ್ಟಾನಕ್ಕಾಗಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ರಚನೆ ಮಾಡಲಾಗಿದೆ. ಕಳೆದ 10 ವರ್ಷಗಳಿಂದ ಜೈವಿಕ ಇಂಧನ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆಯಾದರೂ ಪ್ರಗತಿ ಮಾತ್ರ ಅಷ್ಟಾಗಿ ಹೇಳಿಕೊಳ್ಳುವಂತಿಲ್ಲ.

ಭವಿಷ್ಯದ ಇಂಧನವಾಗಿ ಜೈವಿಕ ಇಂಧನವನ್ನು ಅಭಿವೃದ್ಧಿ ಪಡಿಸುವುದು ಇಂದಿನ ಅವಶ್ಯವಾಗಿದೆ ಎನ್ನುವುದನ್ನು ಮನಗಂಡ ರಾಜ್ಯ ಸರ್ಕಾರ ಪರ್ಯಾಯ ಇಂಧನದ ಮೂಲಗಳ ಅನ್ವೇಷಣೆ ಹಾಗೂ ಬಳಕೆ ಅವಶ್ಯ ಮತ್ತು ಅನಿವಾರ್ಯತೆ ಅರಿತು ಇಂದಿನ ಹಾಗೂ ಮುಂದಿನ ನಾಂಗಕ್ಕೆ ವರದಾನವಾಗಬಲ್ಲ ಇಂಧನ ಸಂಪನ್ಮೂಲವೆನಿಸಿದ ಜೈವಿಕ ಇಂಧನದ ಉತ್ಪಾದನೆ ಉತ್ತೇಜನಕ್ಕೆ ಮುಂದಾಗಿದೆ.

ಅದಕ್ಕಾಗಿಯೇ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು 2010 ರಲ್ಲಿ ರಚನೆ ಮಾಡಿದ್ದು, ಜೈವಿಕ ಇಂಧನ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಜೈವಿಕ ಇಂಧನ ಉತ್ಪಾದನೆಗೆ ಅಖಾದ್ಯ ತೈಲ ಬೀಜಗಳ ಸಂಗ್ರಹಣೆಯನ್ನು ಸಮುದಾಯಗಳು, ಸ್ವ-ಸಹಾಯ ಮಹಿಳಾ ಗುಂಪುಗಳು ಹಾಗೂ ಬಳಕೆದಾರರ ಸಂಘಗಳನ್ನು ತೊಡಗಿಸಿಕೊಂಡು ಕೈಗೊಳ್ಳುವುದು, ಜೈವಿಕ ಇಂಧನ ಸಸಿಗಳನ್ನು ಒಣಭೂಮಿ, ಬಂಜರುಭೂಮಿ ಹಾಗು ಕೃಷಿಗೆ ಯೋಗ್ಯವಲ್ಲದ ಜಮೀನುಗಳಲ್ಲಿ ಬೆಳೆಸುವುದು.

ಈ ಭೂಮಿಯಗಳಲ್ಲಿ ಬೆಳೆಯುವ ಅಖಾದ್ಯ ತೈಲ ಬೀಜಗಳಿಂದ ಬಯೋ ಡೀಸೆಲ್ ಉತ್ಪಾದನೆ, ಎಣ್ಣೆ ತೆಗೆದ ನಂತರ ಬರುವ ಹಿಂಡಿಯನ್ನು ಜೈವಿಕ ಗೊಬ್ಬರವನ್ನಾಗಿ ಬಳಸುವುದು. ಜೈವಿಕ ಇಂಧನ ಕುರಿತ ಸಂಶೋಧನೆ ಮತ್ತು ಅಭಿವೃದ್ಧಿಗೆ ಆಧ್ಯತೆ ನೀಡುವ ಅಂಶವನ್ನು ಜೈವಿಕ ಇಂಧನ ನೀತಿ ಒಳಗೊಂಡಿದೆ.

ರಾಜ್ಯದಲ್ಲಿ ಕೇವಲ 4 ಜೈವಿಕ ಇಂಧನ ಉತ್ಪಾದನಾ ಘಟಕ:

10 ವರ್ಷಗಳಿಂದ ಸರ್ಕಾರ ಹತ್ತಾರು ಕೋಟಿ ವಿನಿಯೋಗಿಸಿ ಜೈವಿಕ ಇಂಧನ ಉತ್ಪಾದನೆಗೆ ಒತ್ತು ನೀಡುತ್ತಾ ಬಂದಿದ್ದರೂ ಕೇವಲ 4 ಕಂಪನಿಗಳು ಮಾತ್ರ ಜೈವಿಕ ಇಂಧನ ಉತ್ಪಾದನೆ ಮಾಡುತ್ತಿವೆ. ಅದು ಕೂಡ ಅಲ್ಪ ಪ್ರಮಾಣದ ಇಂಧನ ಉತ್ಪಾದನೆಯಾಗಿದೆ. ಬೆಂಗಳೂರು,ತುಮಕೂರು,ಧಾರವಾಡ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದೊಂದು ಜೈವಿಕ ಇಂಧನ ಉತ್ಪಾದನಾ ಘಟಕಗಳಿವೆ.

ದಿನಕ್ಕೆ 89 ಸಾವಿರ ಲೀಟರ್ ಉತ್ಪಾದನೆ:

ತುಮಕೂರಿನ ಇಕೋ ಗ್ರೀನ್ ಫ್ಯೂಯಲ್ಸ್ 40 ಸಾವಿರ ಲೀಟರ್, ಬೆಂಗಳೂರಿನ ಪೈರಿನ್ ಇಂಡಸ್ಟ್ರೀಸ್ 10 ಸಾವಿರ ಲೀಟರ್, ಬಾಗಲಕೋಟೆಯ ಟ್ರಾನ್ಸ್ ಬಿಲ್ಲೆ 24 ಸಾವಿರ ಲೀಟರ್, ಧಾರವಾಡದ ಕರ್ನಾಟಕ ಬಯೋಫ್ಯೂಯಲ್ಸ್ 15 ಸಾವಿರ ಲೀಟರ್ ಬಯೋಡೀಸೆಲ್ ಅನ್ನು ಪ್ರತಿ ದಿನ ಉತ್ಪಾದನೆ ಮಾಡುತ್ತಿದೆ. ಒಟ್ಟು ದಿನಕ್ಕೆ 89 ಸಾವಿರ ಲೀಟರ್ ಜೈವಿಕ ಇಂಧನ( ಬಯೋಡೀಸೆಲ್) ಉತ್ಪಾದನೆ ಮಾಡುವಷ್ಟು ಸಾಮರ್ಥ್ಯ ಮಾತ್ರ ರಾಜ್ಯಕ್ಕಿದೆ.

ಕೋಟಿ ಕೋಟಿ ಅನುದಾನ:

ಜೈವಿಕ ಇಂಧನ ಕಾರ್ಯಯೋಜನೆಗಳ ಅನುಷ್ಟಾನಕ್ಕಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡುತ್ತಾ ಬಂದಿದೆ. 2010-11 ರಲ್ಲಿ 3.79 ಕೋಟಿ, 2011-12 ರಲ್ಲಿ 7.5 ಕೋಟಿ, 2012-13 ರಲ್ಲಿ 10 ಕೋಟಿ, 2013-14 ರಲ್ಲಿ 3ಕೋಟಿ, 2014-15 ರಲ್ಲಿ 3.30 ಕೋಟಿ, 2015-16 ರಲ್ಲಿ 3.5 ಕೋಟಿ, 2016-17 ರಲ್ಲಿ 3.87 ಕೋಟಿ,2017-18 ರಲ್ಲಿ 8.87 ಕೋಟಿ, 2018-19 ರಲ್ಲಿ 3.87 ಕೋಟಿ, 2019-20 ರಲ್ಲಿ 4.20 ಕೋಟಿ, 2020-21 ರಲ್ಲಿ 1.30 ಕೋಟಿ ಬಿಡುಗಡೆಯಾಗಿದ್ದು, 2021-22 ನೇ ಸಾಲಿಗೆ 3 ಕೋಟಿ ಅನುದಾನ ಮಂಜೂರಾಗಿದ್ದರೂ ಈವರೆಗೂ ಅನುದಾನವನ್ನು ಬಿಡುಗಡೆ ಮಾಡಿಲ್ಲ.

ಜೈವಿಕ ಇಂಧನ ಅಭಿವೃದ್ಧಿ ಮಂಡಳಿ:

ಕರ್ನಾಟಕ ರಾಜ್ಯ ಜೈವಿಕ ಇಂಧನ ನೀತಿಯ ಅನುಷ್ಟಾನದ ಉಸ್ತುವಾರಿ ನಿರ್ವಹಿಸಲು ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆ ಮತ್ತು ರಾಜ್ಯ ಯೋಜನಾ ಆಯೋಗದ ಅಧ್ಯಕ್ಷರ ಉಪಾಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. 8 ಸಚಿವರು, 21 ಅಧಿಕಾರಿ ಸದಸ್ಯರು, 6 ನಾಮನಿರ್ದೇಶಿತರು, 11 ಕಾರ್ಯಕಾರಿ ಸಮಿತಿ ಸದಸ್ಯರನ್ನು ಈ ಸಮಿತಿ ಹೊಂದಿದೆ.

ಆದರೆ ಪರಿಣಾಮಕಾರಿಯಾಗಿ ಜೈವಿಕ ಇಂಧನ ಉತ್ಪಾದನೆ ಹೆಚ್ಚಳವಾಗುವಂತೆ ಮಾಡಲು ಈ ಸಮಿತಿ ಹಿಂದುಳಿದಿದೆ. ಕೇವಲ ಆಡಳಿತಾತ್ಮಕ ಕೆಲಸ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಅನುದಾನದ ಬಳಕೆಗೆ ಸೀಮಿತವಾದಂತಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ತೈಲ ದರ ಹೆಚ್ಚಳ ಭಾರಿ ಹೊರೆ:

ಡೀಸೆಲ್ ಬಳಕೆದಾರರಿಗೆ ತೈಲ ದರ ಹೆಚ್ಚಳ ಭಾರಿ ಹೊರೆಯಾಗುತ್ತಿದ್ದು, ಪರ್ಯಾಯವಾಗಿ ಜೈವಿಕ ಇಂಧನವನ್ನು ಹೆಚ್ಚು ಹೆಚ್ಚು ಉತ್ಪಾದನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಇರುವ ಬಯೋಡೀಸೆಲ್ ಘಟಕಗಳ ಸಾಮರ್ಥ್ಯ ಹೆಚ್ಚಳ, ಹೊಸ ಹೊಸ ಘಟಕಗಳ ಸ್ಥಾಪನೆ ಅಗತ್ಯವಿದೆ. ಅಖಾದ್ಯ ಎಣ್ಣೆಬೀಜ ಬೆಳೆಯಲು ರೈತರಿಗೆ ಹೆಚ್ಚಿನ ಉತ್ತಾಜನ ನೀಡುವ ಮೂಲಕ ಬಯೋಡೀಸೆಲ್ ಉತ್ಪಾದನೆಗೆ ಸರ್ಕಾರ ಉತ್ತೇಜನ ನೀಡುವ ಮೂಲಕ ಉದ್ದೇಶಿತ ಜೈವಿಕ ಇಂಧನ ನೀತಿಯನ್ನು ಸಾಕಾರಗೊಳಿಸಬೇಕಿದೆ.

ಸಾರಿಗೆ ನಿಗಮಕ್ಕೆ ಬಳಕೆ:

ಡೀಸೆಲ್ ದರದಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು ಈಗಾಗಲೇ 100 ರೂ.ಗಳ ಗಡಿ ದಾಡಿ ಮುಂದೆ ಹೋಗುತ್ತಿದೆ. ಇಂತಹ ಸಂದರ್ಭದಲ್ಲಿ ಪರಿಸರ ಸ್ನೇಹಿಯಾದ ಜೈವಿಕ ಇಂಧನವನ್ನು ಹೆಚ್ಚು ಹೆಚ್ಚು ಉತ್ಪಾದನೆ ಮಾಡಿ ಪರ್ಯಾಯ ಇಂಧನ ಮೂಲವಾಗಿ ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕಿದೆ.

ಕೇವಲ ರಾಜ್ಯದ ಸಾರಿಗೆ ಸಂಸ್ಥೆಯಲ್ಲೇ 25 ಸಾವಿರದಷ್ಟು ಬಸ್ ಗಳಿವೆ. ಇವುಗಳಲ್ಲಿ ಕೆಲವು ಬಸ್ ಗಳಿಗೆ ಪ್ರಾಯೋಗಿಕವಾಗಿ ಜೈವಿಕ ಇಂಧನವನ್ನು ವಿಶ್ರಣ ಮಾಡಿ ಬಳಕೆ ಮಾಡಲಾಗುತ್ತಿದೆ.ಇದನ್ನ ಹೆಚ್ಚಿನ ಪ್ರಮಾಣದಲ್ಲಿ ಅನುಷ್ಟಾನಕ್ಕೆ ತಂದಲ್ಲಿ ಬೊಕ್ಕಸಕ್ಕೆ ಆಗುವ ಹೊರೆ ಕಡಿಮೆಯಾಗುವ ಜೊತೆಗೆ ಪರಿಸರ ಮಾಲಿನ್ಯದ ಪ್ರಮಾಣವೂ ಇಳಿಕೆಯಾಗಲಿದೆ ಎನ್ನುವುದು ಸಾರಿಗೆ ಸಂಸ್ಥೆ ಅಧಿಕಾರಿಗಳು ಅಭಿಪ್ರಾಯವಾಗಿದೆ.

ABOUT THE AUTHOR

...view details