ಕರ್ನಾಟಕ

karnataka

By

Published : Mar 8, 2021, 10:07 AM IST

Updated : Mar 8, 2021, 10:17 AM IST

ETV Bharat / city

ಯಾವ ಕ್ಷೇತ್ರಕ್ಕೆ ಹೆಚ್ಚು ಒತ್ತು: ಬಿಎಸ್​ವೈ ಬಜೆಟ್ ಗಾತ್ರ ಎಷ್ಟು ಗೊತ್ತಾ?

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬಜೆಟ್ ಮಂಡಿಸಲಿದ್ದಾರೆ. ಕೋವಿಡ್-19 ಎರಡನೇ ಅಲೆ ಅಪ್ಪಳಿಸುವ ಆತಂಕದ ಮಧ್ಯೆಯೇ ಬಜೆಟ್ ಮಂಡಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗ್ತಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಮಂಡಿಸಲಿರುವ ಬಜೆಟ್ ಒಟ್ಟು 2.40 ಲಕ್ಷ ಕೋಟಿ ಮೊತ್ತದ್ದಾಗಿರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋವಿಡ್ 19 ಎರಡನೇ ಅಲೆ ಅಪ್ಪಳಿಸುವ ಆತಂಕದ ಮಧ್ಯೆಯೇ ಬಜೆಟ್ ಮಂಡಿಸುತ್ತಿರುವ ಬಿ.ಎಸ್.ಯಡಿಯೂರಪ್ಪ ಜನಪ್ರಿಯ ಬಜೆಟ್ ಮಂಡನೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡುವ ಮೂಲಕ ರಾಜ್ಯದಲ್ಲಿ ಅಭಿವೃದ್ಧಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ ಎನ್ನಲಾಗ್ತಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ರಾಜ್ಯ ಸರ್ಕಾರದ ಮಹತ್ವದ ಬಜೆಟ್​ ಅನ್ನು ವಿಧಾನಸಭೆಯಲ್ಲಿ ಮಂಡಿಸಲಿರುವ ಬಿ.ಎಸ್.ಯಡಿಯೂರಪ್ಪ ಕೃಷಿ, ಪ್ರವಾಸೋದ್ಯಮದ ಜೊತೆಗೆ ಶಿಕ್ಷಣ, ಆರೋಗ್ಯ ಮತ್ತು ಮಹಿಳಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ. ಇದರ ಜೊತೆ ಜೊತೆಗೆ ನೀರಾವರಿ ಮತ್ತು ಸಹಕಾರ ಕ್ಷೇತ್ರಗಳಿಗೂ ಒಂದಿಷ್ಟು ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಹೊಂದಲಾಗಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಈ ಬಾರಿ ಬಜೆಟ್ ಗಾತ್ರ ಇನ್ನಷ್ಟು ಹೆಚ್ಚಿಸಲಿದ್ದಾರೆ. ಕಳೆದ ವರ್ಷ ಮಾರ್ಚ್ ತಿಂಗಳಿಂದ ಲಾಕ್​ಡೌನ್ ಹೇರಿದ್ದ ಹಿನ್ನೆಲೆ ಆದಾಯ ಸಂಗ್ರಹದಲ್ಲಿ ಕೊರತೆ ಉಂಟಾಗಿರುವ ಕಾರಣ ಬಜೆಟ್ ಗಾತ್ರ ಚಿಕ್ಕದಾಗಿರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಳೆದ ಕೆಲ ತಿಂಗಳಲ್ಲಿ ಆದಾಯ ಕ್ರೋಢೀಕರಣ ಉತ್ತಮವಾಗಿರುವ ಜೊತೆಗೆ ವಾಣಿಜ್ಯ ತೆರಿಗೆ ಮತ್ತು ಇತರ ಮೂಲಗಳಿಂದ ಬರುವ ತೆರಿಗೆಗಳ ಸಂಗ್ರಹ ಆಶಾದಾಯಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ ಹಿನ್ನೆಲೆ ಬಜೆಟ್ ಗಾತ್ರವನ್ನು ಹೆಚ್ಚಿಸಲು ಸಿಎಂ ಮುಂದಾಗಿದ್ದಾರೆ ಎನ್ನಲಾಗ್ತಿದೆ.

ಸಾಲ ಹೆಚ್ಚಳ ಸಾಧ್ಯತೆ:

ಬಜೆಟ್ ಗಾತ್ರ ದೊಡ್ಡದಾದಂತೆ ರಾಜ್ಯ ಸರ್ಕಾರ ಮಾಡಬೇಕಾದ ಸಾಲದ ಮೊತ್ತ ಹೆಚ್ಚಾಗಲಿದೆ. ಈ ಹಿನ್ನೆಲೆ ಪ್ರತಿಪಕ್ಷಗಳು ಇದನ್ನು ವಿಶೇಷವಾಗಿ ಚರ್ಚೆಗೆ ತೆಗೆದುಕೊಳ್ಳುವ ನಿರೀಕ್ಷೆ ಇರುವ ಹಿನ್ನೆಲೆ ಸಿಎಂ ಯಾವ ರೀತಿ ಪ್ರತಿಪಕ್ಷಗಳನ್ನು ಎದುರಿಸಲು ಸಜ್ಜಾಗಿದ್ದಾರೆ ಎನ್ನುವುದು ಇನ್ನು ಕೆಲವೇ ಸಮಯದಲ್ಲಿ ತಿಳಿದು ಬರಲಿದೆ. ಹಿಂದೆ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲಿ ಜಾರಿಗೆ ಬಂದ ಹಲವು ಯೋಜನೆಗಳನ್ನು ಕೈಬಿಡಲಾಗಿದೆ ಎಂಬ ಆರೋಪವನ್ನು ಪ್ರತಿಪಕ್ಷಗಳು ಮಾಡುತ್ತಿದ್ದು, ಹೀಗೆ ಕೈಬಿಟ್ಟ ಹಾಗೂ ಅನುದಾನ ಕಡಿತಗೊಳಿಸಿದ ಯೋಜನೆಗಳಿಗೆ ಈ ಬಜೆಟ್​ನಲ್ಲಿ ಯಾವ ರೀತಿಯ ಒತ್ತು ಕೊಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Last Updated : Mar 8, 2021, 10:17 AM IST

ABOUT THE AUTHOR

...view details