ಬೆಂಗಳೂರು: ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ಸ್ವಯಂ ಸೇವಕರು ಮತ್ತು ಸಂಘಟನೆಗಳು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಯಾವುದೇ ಕಾನೂನು ಅಡ್ಡಿಯಾಗಲಾರದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು ಎಂದು ಸೂಚಿಸಿದೆ.
ಕಲಬುರಗಿ ಜಿಲ್ಲಾಡಳಿತ ಕೆಲ ದಿನಗಳ ಹಿಂದೆ ಸ್ವಯಂ ಸೇವಕರು ಮತ್ತು ಸಂಘಟನೆಗಳು ಹೊರಗೆ ಬಂದು ಭಿಕ್ಷುಕರು, ನಿರ್ಗತಿಕರು ಮತ್ತು ನಿರಾಶ್ರಿತರಿಗೆ ಆಹಾರ ನೀಡುವುದು ನಿಷೇಧಾಜ್ಞೆಯ ಉಲ್ಲಂಘನೆ ಎಂದು ಆದೇಶ ಹೊರಡಿಸಿತ್ತು. ಜಿಲ್ಲಾಡಳಿತದ ಈ ಕ್ರಮ ಪ್ರಶ್ನಿಸಿ ನೋ ಯುವರ್ ರೈಟ್ಸ್ ಅಸೋಸಿಯೇಷನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ಪೀಠ, ಜಿಲ್ಲಾಡಳಿತದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದೆ. ಬಡವರಿಗೆ, ನಿರ್ಗತಿಕರಿಗೆ ಮತ್ತು ನಿರಾಶ್ರಿತರಿಗೆ ಆಹಾರ ಒದಗಿಸುವ ವಿಚಾರದಲ್ಲಿ ಸ್ವಯಂ ಸೇವಕರು, ಸಂಘಟನೆಗಳು ಮತ್ತು ಎನ್‌ಜಿಓಗಳೊಂದಿಗೆ ಸರ್ಕಾರ ಮತ್ತು ಜಿಲ್ಲಾಡಳಿತಗಳು ಸಮನ್ವಯ ಸಾಧಿಸಿ ಅವರಿಂದ ಸಹಕಾರ ಪಡೆಯುವ ಅಗತ್ಯವಿದೆ. ಈ ವಿಚಾರವಾಗಿ ಸರ್ಕಾರಕ್ಕೆ ನ್ಯಾಯಾಲಯ ಮೊದಲಿನಿಂದಲೂ ಸಲಹೆ ನೀಡುತ್ತಲೇ ಬಂದಿದ್ದು, ರಾಜ್ಯ ಸರ್ಕಾರ ಕೂಡಲೇ ಪ್ರತಿಕ್ರಿಯಿಸಬೇಕು ಎಂದು ತಾಕೀತು ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಸ್ವಯಂ ಸೇವಾ ಸಂಘಟನೆಗಳು, ಎನ್‌ಜಿಒ ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ವೈಯಕ್ತಿಕವಾಗಿ ನಿರ್ಗತಿಕರಿಗೆ ಮತ್ತು ನಿರಾಶ್ರಿತರಿಗೆ ಆಹಾರ ಒದಗಿಸಲು ಕಲಬುರಗಿ ಜಿಲ್ಲಾಡಳಿತ ಅನುಮತಿ ನೀಡುತ್ತಿಲ್ಲ. ಇದೇ ರೀತಿ ಧಾರವಾಡ ಜಿಲ್ಲಾಡಳಿತವೂ ನಡೆದುಕೊಳ್ಳುತ್ತಿದೆ. ಇವರ ಆದೇಶವನ್ನು ರದ್ದುಗೊಳಿಸಬೇಕು ಅಥವಾ ಮಾರ್ಪಾಡು ಮಾಡಲು ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಇನ್ನು ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್, ಕಲಬುರಗಿ ಜಿಲ್ಲಾಡಳಿತದ ಆದೇಶ ಸಂಬಂಧ ವಿವರಣೆ ನೀಡಲು ಕಾಲಾವಕಾಶ ಬೇಕು ಎಂದು ಕೋರಿದ್ದಾರೆ.