ಬೆಂಗಳೂರು:ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ತನಿಖೆ ನಡೆಸುತ್ತಿರುವ ಸಿಬಿಐಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕೇಂದ್ರೀಯ ತನಿಖಾ ದಳವು ತಮ್ಮ ವಿರುದ್ದ ಅಕ್ರಮ ಆಸ್ತಿ ಸಂಪಾದನೆ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬೇಕೆಂದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ಏಕ ಸದಸ್ಯ ಪೀಠ ಪ್ರತಿವಾದಿಗಳಾದ ಸಿಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಅರ್ಜಿ ವಿಚಾರಣೆ ಮುಂದೂಡಿದೆ.
ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆ ವೇಳೆ ಅರ್ಜಿದಾರ ಡಿ.ಕೆ.ಶಿವಕುಮಾರ್ ಪರ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ ಮತ್ತು ಅರವಿಂದ ಜಾಧವ್ ಅವರು ವಾದ ಮಂಡಿಸಿ ಸಿಬಿಐ ಎಫ್‌ಐಆರ್ ದಾಖಲು ಮಾಡಿರುವ ಔಚಿತ್ಯ ಪ್ರಶ್ನಿಸಿದರು. 1989ರಿಂದ ಇಲ್ಲಿಯವರೆಗೆ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹಲವಾರು ಬಾರಿ ಸಚಿವರೂ ಆಗಿ ಕಾರ್ಯನಿರ್ವಹಿಸಿದ್ದಾರೆ.
ಅವರ ವಿರುದ್ಧ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಎಫ್‌ಐಆರ್ ದಾಖಲಿಸಿರುವುದು ಕಾನೂನು ಬಾಹಿರವಾಗಿದೆ. ಎಫ್‌ಐಆರ್ ದಾಖಲಿಸುವ ವೇಳೆ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣಗಳಲ್ಲಿ ಅನುಸರಿಸಬೇಕಾದ ನಿಯಮ ಪಾಲಿಸಿಲ್ಲ. ಪ್ರಾಥಮಿಕ ತನಿಖೆಯ ಅಂಶಗಳೇನು ಎಂಬುದನ್ನೂ ಎಫ್‌ಐಆರ್‌ನಲ್ಲಿ ವಿವರಿಸಿಲ್ಲ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಅವರು ಕೃಷಿ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅಷ್ಟೇ ಅಲ್ಲ ರಿಯಲ್ ಎಸ್ಟೇಟ್, ಶಿಕ್ಷಣ ಕೇತ್ರ ಸೇರಿದಂತೆ ಇತರ ವ್ಯವಹಾರಗಳ ಮೂಲಕವೂ ಆದಾಯದ ಮೂಲ ಹೊಂದಿದ್ದಾರೆ. ಡಿಕೆಶಿ ಕುಟುಂಬದ ಇತರ ಸದಸ್ಯರ ಆದಾಯವನ್ನೂ ಸಹ ಅವರ ಲೆಕ್ಕಕ್ಕೇ ಸೇರಿಸಲಾಗಿದೆ ಇದು ಕಾನೂನುಬಾಹಿರ ಕ್ರಮವಾಗಿದೆ ಎಂದು ವಾದಿಸಿದರು. ಸಿಬಿಐ ದಾಖಲು ಮಾಡಿರುವ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದರು. ಇದನ್ನು ಆಲಿಸಿದ ಪೀಠವು ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.
ಸಿಬಿಐ ಆರೋಪ: 2013ರ ಏಪ್ರಿಲ್ 1ರಿಂದ 2018ರ ಏಪ್ರಿಲ್ 30ರವರೆಗಿನ ಆದಾಯ ಪರಿಶೀಲನಾ ಅವಧಿಗೂ ಮುನ್ನ ಡಿ.ಕೆ.ಶಿವಕುಮಾರ್ ಅವರ ಸ್ಥಿರ ಮತ್ತು ಚರಾಸ್ತಿಯ ಒಟ್ಟು ಮೊತ್ತ 33.92 ಕೋಟಿ ರೂಪಾಯಿ ಆಗಿತ್ತು. ಪರಿಶೀಲನಾ ಅವಧಿಯಲ್ಲಿ ಈ ಮೊತ್ತ 128.60 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಆದಾಯ ಹೆಚ್ಚಳಕ್ಕೆ ಶಿವಕುಮಾರ್ ಸೂಕ್ತ ದಾಖಲೆಗಳನ್ನುಒದಗಿಸಿಲ್ಲ ಎನ್ನುವುದು ಸಿಬಿಐ ಆರೋಪವಾಗಿದೆ.
ದೋಷಾರೋಪ ಪಟ್ಟಿ ಸಲ್ಲಿಕೆ: ಡಿ.ಕೆ.ಶಿವಕುಮಾರ್ ಹೊಂದಿದ್ದಾರೆನ್ನಲಾದ ಅಕ್ರಮ ಆಸ್ತಿಗೆ ಸಂಬಂಧಪಟ್ಟಂತೆ ಆದಾಯ ತೆರಿಗೆ ಇಲಾಖೆ 2017 ರ ಆಗಸ್ಟ್ 2 ರಂದು ಬೆಂಗಳೂರು ಮತ್ತು ದೆಹಲಿಗಳಲ್ಲಿನ ಆಸ್ತಿ ಪಾಸ್ತಿ ಮೇಲೆ ದಾಳಿ ನಡೆಸಿದ ಪ್ರಕರಣ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇದೆ. 2018 ರ ಆಗಸ್ಟ್ನಲ್ಲಿ ಜಾರಿ ನಿರ್ದೆಶನಾಲಯವು ಆದಾಯ ತೆರಿಗೆ ಇಲಾಖೆಯ ಮಾಹಿತಿ ಆಧರಿಸಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಅಕ್ರಮ ಹಣ ವರ್ಗಾವಣೆ ಪ್ರಕರಣ ಬಗ್ಗೆ ಡಿ.ಕೆ.ಶಿವಕುಮಾರ್ ವಿರುದ್ಧ ಕಾನೂನು ರೀತಿ ಕ್ರಮ ತಗೆದುಕೊಳ್ಳುವಂತೆ ಇಡಿಯು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು. ಈ ನಡುವೆ ರಾಜ್ಯ ಸರ್ಕಾರವು 2019ರ ಸೆಪ್ಟೆಂಬರ್ ತಿಂಗಳಲ್ಲಿ ಅಕ್ರಮ ಆಸ್ತಿ ಪ್ರಕರಣದಲ್ಲಿ ತನಿಖೆ ನಡೆಸಲು ಸಿಬಿಐಗೆ ಅನುಮತಿ ನೀಡಿತ್ತು. ಆ ಪ್ರಕಾರ 2020ರ ಅಕ್ಟೋಬರ್ 3 ರಂದು ಕೆಂದ್ರೀಯ ತನಿಕಾ ದಳವು ಶಿವಕುಮಾರ್ ವಿರುದ್ಧ ಎಫ್‌ಐಆರ್ ದಾಖಲು ಮಾಡಿತ್ತು.
ಇದನ್ನೂ ಓದಿ :ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸನ್ನದ್ದ, ಪಾಲಿಕೆಯಲ್ಲಿ ಗೆಲುವು ಶತಃಸಿದ್ಧ: ಆರ್.ಅಶೋಕ್