ಬೆಂಗಳೂರು: ತಮ್ಮ ಪದಗ್ರಹಣ ಸಮಾರಂಭವನ್ನು ಜೂನ್ 8ರ ನಂತರ ನಿರ್ಧರಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜೂನ್ 7ರಂದು ಕಾರ್ಯಕ್ರಮ ನಡೆಯಬೇಕಾಗಿತ್ತು. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಜೂನ್ 8 ರವರೆಗೂ ಯಾವುದೇ ರಾಜಕೀಯ ಸಮಾರಂಭ ನಡೆಯಬಾರದು ಎಂದು ತಿಳಿಸಲಾಗಿದೆ. ಹೀಗಾಗಿ ಕಾರ್ಯಕ್ರಮ ಮುಂದೂಡಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾರ್ಯಕ್ರಮಕ್ಕೆ 'ಪ್ರತಿಜ್ಞಾ' ಎಂದು ಹೆಸರಿಡಲಾಗಿದೆ. ನಾನು ಅಧ್ಯಕ್ಷನಾಗಿದ್ದರೂ ನಾನೊಬ್ಬ ಕಾರ್ಯಕರ್ತ. ಯಾರು ಎಷ್ಟೇ ದೊಡ್ಡ ಮುಖಂಡರಾಗಿದ್ದರೂ ಎಲ್ಲರೂ ಮೊದಲು ಕಾರ್ಯಕರ್ತರು, ಆಮೇಲೆ ಮುಖಂಡರು. ಹಾಗಾಗಿ ಇಡೀ ರಾಜ್ಯಾದ್ಯಂತ ಎಲ್ಲರೂ ಅಂದು ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದೇವೆ. ಕಾರ್ಯಕ್ರಮದ ದಿನಾಂಕವನ್ನು ತಿಳಿಸಲಾಗುವುದು ಎಂದಿದ್ದಾರೆ.
ಕಾರ್ಯಕ್ರಮದ ದಿನಾಂಕ ಬದಲಾಗಬಹುದು. ಆದರೆ, ಯಾವುದೇ ಕಾರಣಕ್ಕೂ ರದ್ದಾಗುವ ಪ್ರಶ್ನೆ ಇಲ್ಲ. ಜೂನ್ 8 ರಂದು ಬರಲಿರುವ ಸರ್ಕಾರದ ಮುಂದಿನ ಮಾರ್ಗಸೂಚಿಯನ್ನು ಕಾಯೋಣ. ನಿಶ್ಚಿತವಾಗಿ ಕಾನೂನು ಬದ್ದವಾಗಿಯೇ ಕಾರ್ಯಕ್ರಮ ಮಾಡೋಣ. ಹಾಗಾಗಿ ಈಗಾಗಲೇ ಆರಂಭಿಸಿರುವ ಕಾರ್ಯಕ್ರಮದ ಪೂರ್ವ ತಯಾರಿಯನ್ನು ನಿಲ್ಲಿಸಬೇಡಿ, ತಯಾರಿ ಮುಂದುವರೆಸಿ ಎಂದು ಮತ್ತೊಮ್ಮೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ.
ನಿನ್ನೆ ಇದೇ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ್ದ ಶಿವಕುಮಾರ್, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಈ ನಿರ್ಧಾರ ಕೈಗೊಂಡಿದೆ. ಸಾಕಷ್ಟು ಕ್ಷೇತ್ರಗಳಿಗೆ ವಿನಾಯಿತಿ ಹೇಳಿದ್ದು ಉದ್ದೇಶಪೂರ್ವಕವಾಗಿ ರಾಜಕೀಯ ಸಮಾರಂಭ ನಡೆಸುವುದನ್ನು ತಡೆಯಲು ಜೂ.8 ವರೆಗೆ ನಿರ್ಬಂಧ ಮುಂದುವರಿಸಿದೆ. ಕೋವಿಡ್ ವಿಚಾರದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಇದುವರೆಗೂ ನಾವು ಬೆಂಬಲಿಸುತ್ತಲೇ ಬಂದಿದ್ದು, ಈಗಲೂ ಅದನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದ್ದಾರೆ.