ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸದಾಶಿವನಗರದ ತಮ್ಮ ಗೃಹ ಕಚೇರಿಯಲ್ಲಿ ಜೂಮ್ ಮೂಲಕ ಪಕ್ಷದ ವಿವಿಧ ಘಟಕಗಳ ಮುಖಂಡರುಗಳ ಜತೆ ಸಭೆ ಮಹತ್ವದ ನಡೆಸಿದರು. ಈ ಸಂದರ್ಭ ಅಂಡಮಾನ್-ನಿಕೋಬಾರ್ ಕಾಂಗ್ರೆಸ್ ಸಂಸದ ಕುಲದೀಪ್ ರಾಯ್ ಶರ್ಮಾ, ಮುಖಂಡ ಆರ್.ವಿ. ವೆಂಕಟೇಶ್ ಉಪಸ್ಥಿತರಿದ್ದರು.
ಪಕ್ಷ ಬಲವರ್ಧನೆಗೆ ಡಿಕೆಶಿ ಸಭೆ: ವಿವಿಧ ವಿಭಾಗ, ಘಟಕಗಳ ಜತೆ ಚರ್ಚೆ - ಕೋವಿಡ್ ಮೃತರ ಕುಟುಂಬಕ್ಕೆ ಪರಿಹಾರ
ಜೂಮ್ ಆ್ಯಪ್ ಮೂಲಕ ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಕಾಂಗ್ರೆಸ್ ನಾನಾ ಘಟಕಗಳ ಮುಖಂಡರು, ಪ್ರತಿನಿಧಿಗಳ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆ ನಡೆಸಿದರು.
ಪಕ್ಷ ಬಲವರ್ಧನೆ, ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ, ವಿವಿಧ ಹಂತದಲ್ಲಿ ಪಕ್ಷದ ಪ್ರಸ್ತುತ ಸ್ಥಿತಿಗತಿ, ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳು, ಮುಂಬರುವ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಲೋಪಗಳನ್ನು ಎತ್ತಿಹಿಡಿಯಲು ಮಾಹಿತಿ ಸಂಗ್ರಹ, ಅಕಾಲಿಕ ಮಳೆಯಿಂದ ಆಗಿರುವ ಬೆಳೆ ಹಾನಿ, ನಷ್ಟ ಪರಿಹಾರ ಸಿಗದೇ ಇರುವ ಬಗ್ಗೆ ಡಿಕೆಶಿ ಈ ಸಂದರ್ಭದಲ್ಲಿ ಮಾಹಿತಿ ಕಲೆಹಾಕಿದರು.
ಕೋವಿಡ್ ಮೃತರ ಕುಟುಂಬಕ್ಕೆ ಪರಿಹಾರ ನೀಡಿಕೆ ಯಾವ ರೀತಿ ಆಗಿದೆ ಎಂಬುದನ್ನೂ ಇದೇ ಸಂದರ್ಭ ತಿಳಿದುಕೊಂಡಿದ್ದಾರೆ. 2023ರ ವಿಧಾನಸಭೆ ಚುನಾವಣೆ ಜತೆಗೆ ಸದ್ಯವೇ ಬರಲಿರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಚರ್ಚಿಸಿದರು. ಸಾಮಾಜಿಕ ಜಾಲತಾಣ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಣೆ ಮಾಡಬೇಕಿರುವ ಹಿನ್ನೆಲೆಯಲ್ಲಿ ಅವರಿಗೂ ಒಂದಿಷ್ಟು ಮಾರ್ಗದರ್ಶನ ನೀಡಿದರು.