ಬೆಂಗಳೂರು: ಟೆಂಡರ್ ಕಮಿಷನ್ ಆರೋಪ ಸಂಬಂಧ ಸದನ ಸಮಿತಿಯನ್ನ ರಚಿಸಲಿ. ನೀರಾವರಿ ಕಾರ್ಯದರ್ಶಿ ಏನು ತನಿಖೆ ನಡೆಸುತ್ತಾರೆ ಹೇಳಿ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಟೆಂಡರ್ ಕಮಿಷನ್ ಆರೋಪದ ಬಗ್ಗೆ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿರುವುದು.. ತಮ್ಮ ಸದಾಶಿವನಗರ ನಿವಾಸದಲ್ಲಿ ಶೇ.40ರಷ್ಟು ಕಮಿಷನ್ ಆರೋಪದ ಹಿನ್ನೆಲೆ ತನಿಖೆಗೆ ಆದೇಶದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ನಡೆಸುತ್ತೇವೆ.
ಈಗಷ್ಟೇ ಯಾಕೆ ಹತ್ತು ವರ್ಷಗಳ ಅವಧಿಯನ್ನ ತನಿಖೆಗೆ ವಹಿಸಲಿ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾರೇ ತಪ್ಪು ಮಾಡಿರಲಿ. ಮೊದಲು ಎಲ್ಲರ ಅವಧಿಯ ತನಿಖೆ ನಡೆಸಲಿ. ಸಾರ್ವಜನಿಕರ ಹಣ ವ್ಯರ್ಥವಾಗಬಾರದು ಎಂದರು.
ಸುಮ್ಮನೆ ವಜಾ ಮಾಡುವಂತೆ ಹೇಳಿದ್ದೇವಾ?:ನೀರಾವರಿ ಕಾರ್ಯದರ್ಶಿ ಏನು ತನಿಖೆ ನಡೆಸುತ್ತಾರೆ ಹೇಳಿ?. ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲಿ. ಈಗಾಗಲೇ ರಾಜ್ಯಪಾಲರಿಗೆ ಸರ್ಕಾರ ವಜಾ ಮಾಡುವಂತೆ ಒತ್ತಾಯ ಮಾಡಿದ್ದೇವೆ. ನಾವೇನು ಸುಮ್ಮನೆ ವಜಾ ಮಾಡುವಂತೆ ಹೇಳಿದ್ದೇವಾ?. ಲೆಕ್ಕಾಚಾರ ಇಲ್ಲದೇ ರಾಜ್ಯಪಾಲರಿಗೆ ದೂರು ನೀಡಿದ್ದೇವಾ?.
ಕೋವಿಡ್ ಸಂದರ್ಭದಲ್ಲಿ ಎಷ್ಟೆಷ್ಟು ಕಮೀಷನ್ ಪಡೆದಿದ್ದಾರೆ ಅನ್ನೋದು ಗೊತ್ತಿದೆ. ಕೇಂದ್ರ ಒಂದು ಲೆಕ್ಕದಲ್ಲಿ, ರಾಜ್ಯ ಸರ್ಕಾರ ಒಂದು ಲೆಕ್ಕದಲ್ಲಿ ವೈದ್ಯಕೀಯ ಪರಿಕರಗಳನ್ನ ಖರೀದಿ ಮಾಡಿದೆ ಎಂದು ಡಿಕೆಶಿ ಆರೋಪಿಸಿದರು.
ಈ ಹಿಂದೆ ನಮ್ಮ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಶೇ.10 ಪರ್ಸೆಂಟ್ ಎಂದು ಆರೋಪಿಸಿದ್ದರು. ಅವರಿಗೇನು ವಸ್ತು ಸ್ಥಿತಿ ಗೊತ್ತಿರುತ್ತದೆ. ರಾಜ್ಯದ ಬಿಜೆಪಿ ನಾಯಕರ ಮಾತನ್ನು ಕೇಳಿಕೊಂಡು ಆರೋಪ ಮಾಡಿದರು. ಆದರೆ, ಈಗಿನ ಆರೋಪದ ಬಗ್ಗೆ ಏನು ಮಾತನಾಡುತ್ತಾರೆೆ?. ಅವರು ನ್ಯಾಯಾಂಗ ತನಿಖೆ ನಡೆಸುವುದಿಲ್ಲ ಎಂಬುದು ಗೊತ್ತಿದೆ. ಸುಮ್ಮನೆ ಬಿಡಲು ಆಗುತ್ತಾ?. ಎಂದು ಅವರು ಪ್ರಶ್ನಿಸಿದರು.
ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ :ಬಿಜೆಪಿ ನಾಯಕರು ಜೆಡಿಎಸ್ ಬೆಂಬಲ ಕೋರಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಅದು ಜೆಡಿಎಸ್ ಪಕ್ಷದ ವಿಚಾರ. ಈ ಹಿಂದೆಯೂ ಇದೆಲ್ಲ ನಡೆದಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್ ನಡೆದಿತ್ತು. ನಮ್ಮ ಕ್ಷೇತ್ರದಲ್ಲಿಯೂ ನಮ್ಮ ಮತಗಳನ್ನ ಉಳಿಸಿಕೊಳ್ಳಲು ಫ್ರೆಂಡ್ಲಿ ಫೈಟ್ ಮಾಡಿದ್ದೆವು.
ಬಿಜೆಪಿ, ಜೆಡಿಎಸ್, ನಾವು ಮೂರೂ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ನಾವು 25 ಸ್ಥಾನಗಳನ್ನ ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ಆದರೆ, ಅತಿ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು. ನಾನು ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡುವುದಿಲ್ಲ. ಅವರು ಯಾರಿಗೆ ಮತ ನೀಡಬೇಕು, ಯಾರಿಂದ ಮತ ಹಾಕಿಸಿಕೊಳ್ಳಬೇಕು ಎಂಬುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ.
ಅರುಣ್ ಸಿಂಗ್ ಜೆಡಿಎಸ್ ಬಗ್ಗೆ ಹೇಳಿದ್ದನ್ನೂ ನೋಡಿದ್ದೇನೆ. ಬಿಜೆಪಿ ನಾಯಕರು ಜೆಡಿಎಸ್ ಬಗ್ಗೆ ಏನು ಹೇಳಿದ್ದರು ಅನ್ನೋದು ಗೊತ್ತಿದೆ. ಇಷ್ಟಾದರೂ ಆ ಪಕ್ಷ ಧೋರಣೆ ಬಗ್ಗೆ ಮಾತನ್ನಾಡುವುದಿಲ್ಲ. ನಮ್ಮ ಬಲದ ಮೇಲೆ ನಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮುಂದಿನದ್ದು ನೋಡೋಣ ಎಂದರು.
ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಹಳ ಸಂತೋಷ, ನಿಲ್ಲಿಸಲಿ. ನಿಲ್ಲಿಸುವುದು ಬೇಡ ಎಂದು ಹೇಳುತ್ತೇನಾ?. ಅವರಲ್ಲಿ ಶಕ್ತಿ ಇದೆ. ತಾಕತ್ ಇದೆ. ಅದನ್ನ ನಾವು ಪ್ರಶ್ನೆ ಮಾಡಲು ಆಗುತ್ತಾ?. ಕನಕಪುರದಲ್ಲಾದ್ರೂ ನಿಲ್ಲಿಸಲಿ, ಎಲ್ಲಾದರೂ ನಿಲ್ಲಿಸಲಿ. ಕನಕಪುರ ಏನು ದೊಡ್ಡದಾ?.
ಕನಕಪುರದಲ್ಲಿ ಜನರು ಜೆಡಿಎಸ್‌ಗೆ ಮೊದಲಿನಿಂದಲೂ ಅಪಾರವಾದ ಬೆಂಬಲ ಕೊಟ್ಟಿದ್ದಾರೆ. ಎದುರು ಮನೆಯವರ ಮೇಲೆ ಕುಸ್ತಿ ಮಾಡಿದ್ರೆ ಒಂಥರಾ ಇರುತ್ತದೆ. ಪಕ್ಕದ ಮನೆಯವರ ಮೇಲೆ ಕುಸ್ತಿ ಮಾಡಿದ್ರೆ ಒಂಥರಾ ಇರುತ್ತದೆ. ಅಕ್ಕಪಕ್ಕದ ಮನೆಯವರು ಅಲ್ಲವಾ? ಎಂದು ಕುಮಾರಸ್ವಾಮಿಗೆ ಡಿಕೆಶಿ ಪರೋಕ್ಷವಾಗಿ ಟಾಂಗ್ ನೀಡಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಹಿಂದುಳಿದ ವರ್ಗದ ಯಾರೊಬ್ಬರನ್ನೂ ಮೇಲೆ ತರಲಿಲ್ಲ : ಸಚಿವ ಈಶ್ವರಪ್ಪ