ಕರ್ನಾಟಕ

karnataka

ETV Bharat / city

ಜೆಡಿಎಸ್ ಮತಬ್ಯಾಂಕ್ ಸೆಳೆಯಲು ಡಿಕೆಶಿ ರೂಪಿಸಿದ ತಂತ್ರವೇ ಮೇಕೆದಾಟು ಪಾದಯಾತ್ರೆ! - ಜೆಡಿಎಸ್ ಮತ ಸೆಳೆಯಲು ಡಿಕೆ ಶಿವಕುಮಾರ್ ತಂತ್ರಗಾರಿಕೆ

ಹಳೆ ಮೈಸೂರು ಭಾಗದ ಅದರಲ್ಲೂ ಪ್ರಮುಖವಾಗಿ ರಾಮನಗರ, ಮಂಡ್ಯ, ಚಾಮರಾಜನಗರ ಹಾಸನ ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಮುರಿಯಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ರೂಪಿಸಿ, ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಮೇಕೆದಾಟು ಪಾದಯಾತ್ರೆ,ಜೆಡಿಎಸ್ ಮತ ಸೆಳೆಯಲು ಕಾಂಗ್ರೆಸ್ ತಂತ್ರ
ಮೇಕೆದಾಟು ಪಾದಯಾತ್ರೆ

By

Published : Jan 2, 2022, 3:55 PM IST

ಬೆಂಗಳೂರು: ಈಗಾಗಲೇ ಜೆಡಿಎಸ್​​ನ ಹಲವು ಶಾಸಕರನ್ನ ಸೆಳೆಯುವ ಕಾರ್ಯವನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರಂಭಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಳೆ ಮೈಸೂರು ಭಾಗದ ಅದರಲ್ಲೂ ಪ್ರಮುಖವಾಗಿ ರಾಮನಗರ, ಮಂಡ್ಯ, ಚಾಮರಾಜನಗರ, ಹಾಸನ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಮುರಿಯಲು ತಂತ್ರಗಾರಿಕೆ ರೂಪಿಸಿರುವ ಡಿಕೆಶಿ, ಒಂದೇ ಪ್ರಯತ್ನದಲ್ಲಿ ನಾಲ್ಕಾರು ಜಿಲ್ಲೆಯ ಜೆಡಿಎಸ್ ಪ್ರತಿನಿಧಿಗಳನ್ನು ಸೆಳೆದು ತನ್ಮೂಲಕ ಕಾಂಗ್ರೆಸ್ ಮತಬ್ಯಾಂಕ್ ದೊಡ್ಡದಾಗಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಸುತ್ತಿವೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಎಲ್ಲಾ ಏಳು ಕ್ಷೇತ್ರವನ್ನು ಗೆದ್ದಿತ್ತು. ಇದೀಗ ಕಾಂಗ್ರೆಸ್ 2013ರಲ್ಲಿ ತಾನು ಗೆದ್ದಿದ್ದ ಎರಡು ಕ್ಷೇತ್ರಗಳ ಜೊತೆ ಜೆಡಿಎಸ್​ನ ಒಂದಷ್ಟು ಕ್ಷೇತ್ರಗಳನ್ನು ಕಿತ್ತುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ಈಗಾಗಲೇ ಜೆಡಿಎಸ್ ತೊರೆದು ಬಿಜೆಪಿ ಸೇರಿ ಸಚಿವರಾಗಿರುವ ನಾರಾಯಣ ಗೌಡರನ್ನು ಕಾಂಗ್ರೆಸ್​​ನತ್ತ ಸೆಳೆಯುವ ಪ್ರಯತ್ನದಲ್ಲಿ ಬಹುತೇಕ ಸಫಲರಾಗಿರುವ ಡಿಕೆಶಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯದ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ತಮ್ಮ ತವರು ಜಿಲ್ಲೆಯಾದ ರಾಮನಗರದಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯಾಗಿದೆ. ತಾವು ಪ್ರತಿನಿಧಿಸುವ ಕನಕಪುರ ಕ್ಷೇತ್ರವನ್ನು ಹೊರತುಪಡಿಸಿದರೆ ಮಾಗಡಿ, ರಾಮನಗರ ಹಾಗೂ ಚನ್ನಪಟ್ಟಣವನ್ನು ಗೆಲ್ಲುವಲ್ಲಿ ಡಿಕೆಶಿಗೆ ಹಿನ್ನಡೆ ಉಂಟಾಗಿದೆ. ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಹಾಗೂ ಎ. ಮಂಜುನಾಥ ಪ್ರತಿನಿಧಿಸುತ್ತಿರುವ ಕ್ಷೇತ್ರಗಳನ್ನು ಕಾಂಗ್ರೆಸ್ ಮತ ಸೆಳೆಯುವ ಪ್ರಯತ್ನದ ಭಾಗವಾಗಿಯೇ ಮೇಕೆದಾಟು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎನ್ನಲಾಗ್ತಿದೆ.

(ಇದನ್ನೂ ಓದಿ: ತಜ್ಞರ ಸಲಹಾ ಸಮಿತಿ ವರದಿಯಲ್ಲಿ ಲಾಕ್​ಡೌನ್ ಪ್ರಸ್ತಾಪ.. ರಾಜ್ಯಕ್ಕೆ ಮತ್ತೊಮ್ಮೆ ಬೀಳುತ್ತಾ ಬೀಗ?)

ಈಗಾಗಲೇ ಕಾಂಗ್ರೆಸ್ ಪಕ್ಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಧಿಕೃತವಾಗಿ ಒಂದು ಸ್ಥಾನವನ್ನು ಹೊಂದಿದೆ. ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್​​ಗೆ ಬೆಂಬಲ ನೀಡಿದ್ದು, ಮುಂದಿನ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ದೇವನಹಳ್ಳಿಯಿಂದ ಗೆದ್ದಿರುವ ನಿಸರ್ಗ ನಾರಾಯಣಸ್ವಾಮಿ ಹಾಗೂ ನೆಲಮಂಗಲದಿಂದ ಗೆದ್ದಿರುವ ಕೆ ಶ್ರೀನಿವಾಸಮೂರ್ತಿ ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.

ತುಮಕೂರು ಜಿಲ್ಲೆಗೆ ಬಂದರೆ ಕೇವಲ ಮೂವರು ಶಾಸಕರನ್ನು ಕಾಂಗ್ರೆಸ್ ಹೊಂದಿದೆ. ಇಲ್ಲಿಯ ಜೆಡಿಎಸ್ ಪ್ರಾಬಲ್ಯ ಚೆನ್ನಾಗಿದ್ದು, ಮೂವರು ಶಾಸಕರು ಜೆಡಿಎಸ್ ಪ್ರತಿನಿಧಿಸುತ್ತಿದ್ದಾರೆ. ಇವರಲ್ಲದೆ ಮೈಸೂರು, ಹಾಸನ, ಕೋಲಾರ-ಚಿಕ್ಕಬಳ್ಳಾಪುರದಲ್ಲಿಯೂ ಜೆಡಿಎಸ್ ತನ್ನ ಉತ್ತಮ ಹಿಡಿತವನ್ನು ಹೊಂದಿದೆ. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಶಾಸಕರನ್ನು ಕಾಂಗ್ರೆಸ್ ಮತ ಸೆಳೆಯುವ ಪ್ರಯತ್ನದ ಜೊತೆಗೆ ಮುಂದೆ ನಾವು ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿಗೊಳಿಸುವ ಮೂಲಕ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ಹಾಗೂ ನೀರಾವರಿಗೆ ನೀರನ್ನು ಒದಗಿಸುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.

(ಇದನ್ನೂ ಓದಿ: ಬಾಹ್ಯಾಕಾಶ ನಿಲ್ದಾಣದಿಂದ ಸೆರೆ ಹಿಡಿದ 2022ರ ಮೊದಲ ಸೂರ್ಯೋದಯದ ಫೋಟೋ)

ಜನವರಿ 9 ರಿಂದ 19 ರವರೆಗೆ ರಾಮನಗರ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅತ್ಯಂತ ವ್ಯವಸ್ಥಿತವಾಗಿ ಜೆಡಿಎಸ್ ಮತ ಬ್ಯಾಂಕನ್ನು ಕಾಂಗ್ರೆಸ್ ನತ್ತ ಸೆಳೆಯುವ ಪ್ರಯತ್ನ ನಡೆಸಿದೆ. ಇದಕ್ಕೆ ಜೆಡಿಎಸ್​ ಪ್ರತಿತಂತ್ರ ಏನು ಹಾಗೂ ಜೆಡಿಎಸ್ ಮತದಾರರು ಕಾಂಗ್ರೆಸ್ ಕೈ ಹಿಡಿಯುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

(ಇದನ್ನೂ ಓದಿ: ಕೋವಿಡ್​ ನಿಯಂತ್ರಣಕ್ಕೆ ಕಠಿಣ ಕ್ರಮ.. ಸಚಿವ ಅಶೋಕ್ ನೀಡಿದ್ರಾ ಲಾಕ್​ಡೌನ್​ ಸುಳಿವು?)

ABOUT THE AUTHOR

...view details