ಬೆಂಗಳೂರು: ಗೃಹ ಸಚಿವರಿಗೆ ರಾಜಕೀಯ ಅನುಭವ ಇಲ್ಲ. ವಯಸ್ಸಿನಲ್ಲಿ ಅವರು ದೊಡ್ಡವರಿರಬಹುದು. ಆದರೆ, ರಾಜಕೀಯದಲ್ಲಿ ಎಳಸು ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಆರಗ ಜ್ಞಾನೇಂದ್ರರನ್ನ ಲೇವಡಿ ಮಾಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್.. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಸ್ತೆಯಲ್ಲಿ ನಾನು ನಡೆಯೋದಕ್ಕೆ ಬಿಜೆಪಿ ನಾಯಕರ ಅನುಮತಿ ಬೇಕಾ? ಹೋರಾಟ, ಪಾದಯಾತ್ರೆ ಮಾಡೋದಕ್ಕೆ ಇವರ ಅನುಮತಿ ಕೇಳಬೇಕಾ? ಅಶೋಕಣ್ಣನಿಗೆ, ಕೆಲ ನಾಯಕರಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೇ.? ಯಾರಾದರು ಆಫೀಸರ್ ಅನ್ನು ಕೂರಿಸಿಕೊಂಡು ಮಾಹಿತಿ ಕೇಳಲಿ ಎಂದು ಸಲಹೆ ಇತ್ತಿದ್ದಾರೆ.
'ನನ್ನಲ್ಲಿ ಹೋರಾಟದ ಗುಣವಿದೆ' :ಮೇಕೆದಾಟು ಯೋಜನೆ ಸಂಬಂಧ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಡಿಪಿಆರ್ ಮಾಡಿ ಕಳಿಸಿದ್ವಿ. ಪರಿಸರ ಕ್ಲಿಯರೆನ್ಸ್ ಕೊಡಬೇಕಾಗಿದ್ದು ಸಿದ್ದರಾಮಯ್ಯ ಅಲ್ಲ, ಡಿಕೆಶಿ ಅಲ್ಲ, ಕೇಂದ್ರ ಸರ್ಕಾರ. ಪಾದಯಾತ್ರೆ ವಿಚಾರದಲ್ಲಿ ನನಗೆ ಯಾವ ವೈಯಕ್ತಿಕ ಹಿತಾಸಕ್ತಿ ಇಲ್ಲ. ನನ್ನಲ್ಲಿ ಹೋರಾಟದ ಸಣ್ಣ ಗುಣ ಇದ್ದಿದ್ದಕ್ಕೆ ದೇವೇಗೌಡರ ಎದುರು ಅಂದು ಚುನಾವಣೆಗೆ ನಿಲ್ಲಿಸಿದ್ರು. ಸೋತಿರಬಹುದು. ಆದ್ರೆ, ಅಂತಹ ಹೋರಾಟಗಾರರ ಎದುರು ನನ್ನನ್ನು ನಿಲ್ಲಿಸಬೇಕು ಅಂದ್ರೆ ನನ್ನ ಹೋರಾಟದ ಗುಣ ಕಾರಣ ಅಲ್ವಾ? ಎಂದು ಕೇಳಿದ್ರು.
ಹೊಸ ವರ್ಷ ರಾಜ್ಯದ ಜನತೆಗೆ ಆರೋಗ್ಯ, ಶಕ್ತಿ ಕೊಡಲಿ ಎಂದು ಇದೇ ವೇಳೆ ಹಾರೈಸಿದರು. ಮಾನಸಿಕವಾಗಿ ರಾಜ್ಯದ ಜನತೆ ಕುಗ್ಗಿ ಹೋಗಿದ್ದಾರೆ. ಕೋವಿಡ್ ಮಕ್ಕಳ ವಿದ್ಯಾಭ್ಯಾಸದ ಮೇಲೆ ಬಹಳ ಪರಿಣಾಮ ಬೀರಿದೆ. ರೂಪಾಂತರಿ ಒಮಿಕ್ರಾನ್ ಕೂಡ ದೂರ ಹೋಗಬೇಕು ಎಂದರು.
ವಿದೇಶದಿಂದ ಬಂದವರ ಬಳಿ ಸುಲಿಗೆ :ವಿಮಾನದ ಮೂಲಕ (ಹೊರದೇಶ) ಬಂದವರಿಂದ ಸುಲಿಗೆ ಮಾಡುವ ದೊಡ್ಡ ದಂಧೆ ನಡೆಯುತ್ತಿದೆ. ನೆಗಡಿ ಬಂದವರಿಗೂ ಕೊರೊನಾ ಪಾಸಿಟಿವ್ ವರದಿ ಕೊಡ್ತಿದ್ದಾರೆ. ಹೊರಗಡೆಯಿಂದ ಇಲ್ಲಿಗೆ ಬಂದವರಿಗೆಲ್ಲ ಪಾಸಿಟಿವ್ ರಿಪೋರ್ಟ್ ಕೊಟ್ಟು ಮೂರು ಮೂರು ಸಾವಿರ ರೂ. ವಸೂಲಿ ಮಾಡ್ತಿದ್ದಾರೆ. ಸಿಎಂ ಈ ಬಗ್ಗೆ ಗಮನ ಹರಿಸಬೇಕು ಎಂದರು.
ನಮ್ಮ ಪಾದಯಾತ್ರೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಪಾದಯಾತ್ರೆಯಲ್ಲಿ ನಾಲ್ಕೈದು ಆ್ಯಂಬುಲೆನ್ಸ್ಗಳು ಇರುತ್ತವೆ. ಸಾವಿರಾರು ಎಳನೀರು ಕೊಡುವುದಕ್ಕೆ ಮಂಡ್ಯ, ಮದ್ದೂರು ಜನ ರೆಡಿ ಇದ್ದಾರೆ. ನೂರು ಜನ ಬರುತ್ತಾರೋ, ಐದು ನೂರು ಜನ ಬರುತ್ತಾರೋ, ಐದು ಸಾವಿರ ಜನ ಬರುತ್ತಾರೋ, ಒಟ್ಟಾರೆ ಎಲ್ಲರಿಗೂ ಆಹ್ವಾನ ಕೊಡುತ್ತಿದ್ದೇವೆ. ಯಾರಿಗೂ ಬಲವಂತ ಇಲ್ಲ ಎಂದರು.
ಪಾದಯಾತ್ರೆಗೆ ಯಾರ ಅನುಮತಿಯೂ ಬೇಡ :ಗೃಹ ಸಚಿವರ ಅನುಮತಿಯೂ ಬೇಡ, ರಕ್ಷಣೆಯೂ ಬೇಡ. ದೇವೇಗೌಡರು ನಡೆದಾಗ, ಚಂದ್ರಶೇಖರ ನಡೆದಾಗ ಸ್ಟಾಂಪ್ ಹಾಕಿ ಕೊಟ್ಟಿದ್ದರಾ? ಹೋರಾಟಗಾರರ್ಯಾರೂ ಕೋಳಿ ಕೇಳಿ ಮಸಾಲೆ ಅರಿತಾರಾ? ಎಂದು ಪ್ರಶ್ನಿಸಿದ್ರು. ಹೋಂ ಮಿನಿಸ್ಟರ್ ಬರಲಿ, ಬ್ಯಾಲದ ಹಣ್ಣಿನ ಪಾನಕ ಕುಡಿಸಿ ಕಳಿಸುತ್ತೇವೆ. ರಾಮ ರಸ ಅಲ್ಲ, ಪಾನಕ ಕುಡಿಸಿ ಕಳಿಸುತ್ತೇವೆ ಎಂದರು.
ಇನ್ನೂ ಅಶೋಕಣ್ಣನಿಗೆ ಬೆಂಗಳೂರಿನ ಬಗ್ಗೆ ಕಾಳಜಿ ಇದ್ರೆ ತಾನೇ? ಕಾವೇರಿ ಶುದ್ಧ ನೀರು ಕೊಡಬೇಕು ಅಂತಾ ನಾವು ಪ್ರಯತ್ನ ಮಾಡ್ತಿದ್ದೇವೆ. ಇಡೀ ದೇಶದಲ್ಲಿ 37% ಟ್ಯಾಕ್ಸ್ ಬೆಂಗಳೂರಿನವರು ಕಟ್ಟುತ್ತಿದ್ದಾರೆ ಅನ್ನೋದು ಅಶೋಕಣ್ಣನಿಗೆ ಗೊತ್ತಿಲ್ಲ ಎಂದರು.
'ಟೀಕೆ ಮಾಡುವವರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು':ಒಟ್ಟಾರೆ ನನಗೆ ನನ್ನ ಪಕ್ಷ ಬೆಳೆಯಬೇಕು, ನಮ್ಮ ಜನ ಬೆಳೆಯಬೇಕು. ಸಚಿವ ಜ್ಞಾನೇಂದ್ರ ಏನು ಹೇಳ್ತಾರೆ, ಅಶೋಕಣ್ಣ ಏನು ಹೇಳ್ತಾರೆ ಎಲ್ಲವನ್ನೂ ಗಮನಿಸ್ತೀದ್ದೀವಿ. ರಥ ಯಾತ್ರೆ ಅಂತಾನಾದ್ರೂ ಹೇಳಲಿ, ಮತಯಾತ್ರೆ ಅಂತಾನಾದ್ರೂ ಹೇಳಲಿ. ಬೆಂಗಳೂರಿಗೆ ನೀರು ಕೊಡುವ ವಿಚಾರದಲ್ಲಿ ಆಶೋಕ್ಗೆ ಕಾಳಜಿ ಇಲ್ಲ. ಎಲ್ಲರೂ ಪಾದಯಾತ್ರೆ ಬಗ್ಗೆ ಟೀಕೆ ಮಾಡುತ್ತಿದ್ದಾರಷ್ಟೇ.. ಅವರು ಬರಲಿ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿ, ನನ್ನದೇನು ತಕರಾರಿಲ್ಲ ಎಂದರು.