ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ 2,000ಕ್ಕಿಂತಲೂ ಹೆಚ್ಚು ಸ್ಥಳಗಳಲ್ಲಿಬೃಹತ್ ಅಭಿಯಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜೂಮ್ ಸಂವಾದದ ಮೂಲಕ ಚಾಲನೆ ನೀಡಿದರು.
ಎಐಸಿಸಿ ಮಾಹಿತಿ ವಿಶ್ಲೇಷಣೆ ವಿಭಾಗದ ಮುಖ್ಯಸ್ಥ ಪ್ರವೀಣ್ ಚಕ್ರವರ್ತಿ, ಎಐಸಿಸಿ ಕಾರ್ಯದರ್ಶಿ ಪಿ.ವಿ. ಮೋಹನ್, ಶಾಸಕ ವಿ. ಮುನಿಯಪ್ಪ, ಕೆಪಿಸಿಸಿ ಸದಸ್ಯತ್ವ ನೋಂದಣಿ ಅಭಿಯಾನ ಸಮಿತಿ ಸಂಚಾಲಕ ಆರ್.ವಿ. ವೆಂಕಟೇಶ್, ಡಿಜಿಟಲ್ ಸದಸ್ಯತ್ವ ನೋಂದಣಿ ವಿಭಾಗದ ಸಂಚಾಲಕ ರಘುನಂದನ್ ರಾಮಣ್ಣ, ಎಐಸಿಸಿ ಮಾಜಿ ಕಾರ್ಯದರ್ಶಿ ಸೂರಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್, ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ, ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ ಮತ್ತಿತರರು ಜೂಮ್ ಸಂವಾದದಲ್ಲಿ ಪಾಲ್ಗೊಂಡು ಸದಸ್ಯತ್ವ ಅಭಿಯಾನ ಕುರಿತು ಸಂದೇಶ ನೀಡಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮೇಕೆದಾಟು ಪಾದಯಾತ್ರೆ ಜನವರಿ ಮೊದಲನೇ ವಾರದಲ್ಲಿ ಪ್ರಾರಂಭವಾಗುತ್ತದೆ. ಸದ್ಯಕ್ಕೆ ದಿನಾಂಕದ ಬಗ್ಗೆ ಪ್ಲ್ಯಾನ್ ನಡೆಯುತ್ತಿದೆ. ಈ ವಿಚಾರವಾಗಿ 13ಕ್ಕೆ ಸಭೆ ಮಾಡಲಾಗುತ್ತದೆ ಎಂದರು.
ಸದಸ್ಯತ್ವ ಅಭಿಯಾನಕ್ಕೆ ಚಾಲನೆ :ಇಂದು ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಿಎಂ ಇಬ್ರಾಹಿಂ ಸದಸ್ಯತ್ವ ಪಡೆಯಲು ಬಂದಿದ್ದರು. ಅವರು ವೋಟರ್ ಐಡಿ ತಂದಿರಲಿಲ್ಲ. ವೋಟರ್ ಐಡಿ ತಂದು ಬೂತ್ನಲ್ಲಿ ಸದಸ್ಯತ್ವ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಇದರ ಜೊತೆಗೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.
ಪಾಲಿಗೆ ಬಂದಿದ್ದು ಪಂಚಾಮೃತ :ಪರಿಷತ್ ಚುನಾವಣೆಯಲ್ಲಿ 15 ಸ್ಥಾನ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಉಳಿದ ಸ್ಥಾನ ನಾವು ಗೆಲ್ಲುತ್ತೇವೆ. ಅವರಿಗೆ ಎಷ್ಟು ಸ್ಥಾನ ಬೇಕೋ ಅಷ್ಟು ಇಟ್ಟುಕೊಂಡು ಮಿಕ್ಕಿದ್ದು ನಮಗೆ ಬಿಟ್ಟಿದ್ದಾರೆ. ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಭಾವಿಸುತ್ತೇವೆ ಎಂದು ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸಿದರು.