ಬೆಂಗಳೂರು : ಅಮೂಲ್ಯ ಅವರಿಗೆ ಮಾತನಾಡಲು ಅವಕಾಶ ಕೊಡಬೇಕಿತ್ತು. ಆಕೆ ಇನ್ನೂ ಏನೋ ಹೇಳುತ್ತಿದ್ದರು ಎಂದು ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಅಮೂಲ್ಯ ಲಿಯೋನ್ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಆಕೆ ಈ ಹಿಂದೆ ಮಾಡಿರುವ ಭಾಷಣಗಳನ್ನು ನೋಡಿದ್ದೇನೆ, ಅಂತಹ ವಿವಾದಾತ್ಮಕ ಅಂಶಗಳನ್ನು ಕೇಳಿರಲಿಲ್ಲ. ಇದರ ಬಗ್ಗೆ ನನಗೆ ಇನ್ನೂ ಕೆಲವು ಸ್ಪಷ್ಟನೆಗಳು ಬೇಕಿವೆ. ಹಾಗಾಗಿ ಈ ಬಗ್ಗೆ ನಾನು ಹೆಚ್ಚೇನೂ ಕಮೆಂಟ್ ಮಾಡುವುದಿಲ್ಲ ಎಂದರು.
ಅಲ್ಲದೇ ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಖಂಡನೀಯ ನಡವಳಿಕೆ. ಪೊಲೀಸರು ಸರಿಯಾದ ತನಿಖೆ ನಡೆಸಿ ಆಕೆಗೆ ತನ್ನ ತಪ್ಪಿನ ಅರಿವಾಗುಂತಹ ಶಿಕ್ಷೆ ನೀಡಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್ ಕಿಡಿಕಾರಿದ್ದಾರೆ. ಪಾಕಿಸ್ತಾನ ಒಂದು ದರಿದ್ರ ರಾಷ್ಟ್ರ. ಅದರ ಜೊತೆ ಯಾಕೆ ಹೋಲಿಕೆ ಮಾಡಿಕೊಳ್ಳಬೇಕು? ಅಮೂಲ್ಯಗಿನ್ನೂ ಕೇವಲ 18-19 ವರ್ಷ ಇರಬೇಕು. ಇಂಥವರು ಘೋಷಣೆ ಕೂಗ್ತಾರೆ ಅಂದರೆ ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ನೋಡಬೇಕಿದೆ. ಯಾರು ಈ ಕೆಲಸ ಮಾಡಿದ್ದಾರೆ ಅನ್ನುವುದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಕೆಲವು ಹೈದರಾಬಾದ್ ಮೂಲದ ನಾಯಕರೂ ಇಲ್ಲಿದ್ದರು. ಅದರ ಬಗ್ಗೆಯೂ ಗೃಹ ಇಲಾಖೆ ಗಮನಹರಿಸಿ ತನಿಖೆ ಮಾಡಬೇಕಿದೆ ಎಂದರು.