ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುರಿತಾಗಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಕೆಪಿಸಿಸಿ ಸಮನ್ವಯಕಾರ ಸಲೀಂ ನಡುವೆ ನಡೆದ ಸಂಭಾಷಣೆಯ ವಿಡಿಯೋ ಇವತ್ತು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತು.
ಡಿಕೆಶಿ ಕುರಿತ ಉಗ್ರಪ್ಪ-ಸಲೀಂ ಸಂಭಾಷಣೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸುವ ಸಲುವಾಗಿ ನಿನ್ನೆ(ಮಂಗಳವಾರ) ಸಂಜೆ ಮಾಧ್ಯಮಗೋಷ್ಠಿ ನಡೆಸಿದ ಉಗ್ರಪ್ಪ ಜೊತೆ ಸಲೀಂ ಕೂಡ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಈ ಮಾಧ್ಯಮಗೋಷ್ಠಿ ಆರಂಭಕ್ಕೂ ಮುನ್ನ ಇಬ್ಬರ ನಡುವೆ ನಡೆದ ಸಂಭಾಷಣೆಯಲ್ಲಿ ಡಿಕೆಶಿ ಕುರಿತಾದ ವಿಚಾರ ಪ್ರಸ್ತಾಪವಾಗಿತ್ತು.
ಡಿಕೆಶಿ ಬಗ್ಗೆ ಉಗ್ರಪ್ಪ-ಸಲೀಂ ಸಂಭಾಷಣೆ ವಿಡಿಯೋ ವೈರಲ್ ಎಸ್.ಉಗ್ರಪ್ಪ-ಸಲೀಂ ಸಂಭಾಷಣೆಯ ಸಾರಾಂಶ:
ವೇದಿಕೆಯಲ್ಲಿ ಕುಳಿತಿದ್ದ ಉಗ್ರಪ್ಪನವರ ಜೊತೆ ಮೆಲ್ಲಗೆ ಮಾತು ಆರಂಭಿಸಿದ ಸಲೀಂ, 'ಈ ಹಿಂದೆ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದು ಅದನ್ನು 12 ಪರ್ಸೆಂಟ್ ಮಾಡಿದರು. ಹಾಗಾಗಿ, ಅಡ್ಜಸ್ಟ್‌ಮೆಂಟ್ ಡಿಕೆಶಿ ಅವರದ್ದೂ ಇದೆ ಎಂದರು. ಈ ಸಂದರ್ಭದಲ್ಲಿ ಉಪ್ಪಾರು, ಜಿ.ಶಂಕರ್, ಹನುಮಂತಪ್ಪ ಹಾಗು ಜಿ. ಶಂಕರ್ ಅವರ ಹೆಸರುಗಳನ್ನು ಪ್ರಸ್ತಾಪ ಮಾಡಿದರು. ಉಪ್ಪಾರು ಅವರು ಬೆಂಗಳೂರಿನಲ್ಲಿ ಎಸ್.ಎಂ.ಕೃಷ್ಣ ಅವರ ಮನೆ ಎದುರಿಗೆ ಮನೆ ನಿರ್ಮಿಸಿರುವ ಬಗ್ಗೆ ಹೇಳಿದರು. ಇದೇ ವೇಳೆ, 'ಇವರು' ದೊಡ್ಡ ಸ್ಕ್ಯಾಂಡಲ್, ಕೆದಕುತ್ತಾ ಹೋದರೆ ಇವರದ್ದೂ ಕೂಡಾ ಬರುತ್ತೆ' ಎಂದರು.
ಮತ್ತೆ ಮಾತು ಮುಂದುವರೆಸಿದ ಸಲೀಂ, 'ನಮ್ಮ ಮುಳಗುಂದೆಯಲ್ಲಿ 5 ರಿಂದ 100 ಕೋಟಿ ರೂ ಮಾಡಿದ್ದಾನೆ. ಅವನು ಅಷ್ಟು ಮಾಡಿದ್ದಾನೆ ಅಂದ್ರೆ ಡಿಕೆಶಿ ಹತ್ತಿರ ಎಷ್ಟು ಇರಬೇಕು?. ಇವನು ಬರೀ ಕಲೆಕ್ಷನ್ ಗಿರಾಕಿ' ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ವಿ.ಎಸ್.ಉಗ್ರಪ್ಪ, 'ನಾವೆಲ್ಲಾ ಪಟ್ಟುಹಿಡಿದು ಅಧ್ಯಕ್ಷನನ್ನಾಗಿ ಮಾಡಿದೆವು. ಆದರೂ ತಕ್ಕಡಿ ಏಳುತ್ತಿಲ್ಲ ಎಂದರು. ಈ ಸಂದರ್ಭದಲ್ಲಿ ಸಲೀಂ, 'ಇವರು ಎಮೋಷನ್‌ನಲ್ಲಿ ಮಾತನಾಡೋಕೆ ಹೋಗ್ತಾರೆ. ಆದ್ರೆ, ಸಿದ್ದರಾಮಯ್ಯನವರದ್ದು ಬಾಡಿ ಲಾಂಗ್ವೆಜ್ ಹೆಂಗಿದೆ. ಅವರದ್ದು ಖಡಕ್ ಅಂದ್ರೆ ಖಡಕ್ ಎಂದು ಹೊಗಳಿದರು.